

ಕಳಸ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮುರಳೀಧರ ಭಟ್ ನೇತೃತ್ವದಲ್ಲಿ ಸಂಸ್ಕೃತಿ ಕುಣಿತ ಭಜನಾ ತಂಡ ರಚನೆಯಾಗಿದೆ. ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಎನ್ನುವುದು ಹಿರಿಯರ ಮಾತು ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಸುಜಯಾ ಸದಾನಂದ ಹೇಳಿದರು.
ಬಾಳೆಹೊಳೆ, ಕೆಳಭಾಗ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಸ್ಕೃತಿ ಕುಣಿತ ಭಜನಾ ತಂಡ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಆಧ್ಯಾತ್ಮಿಕ ಚಿಂತನೆ ಬೆಳೆಸಬೇಕು. ಇದರಿಂದ ಉತ್ತಮ ಪ್ರಜೆಗಳಾಗಿ ಬಾಳಲು ಸಹಕಾರಿಯಾಗುತ್ತದೆ. ಸಂಘಟನೆಯೊಂದಿಗೆ ಜತೆಗೂಡಿದಾಗ ಮಕ್ಕಳಲ್ಲಿ ಶಿಸ್ತು ಬೆಳೆಯುತ್ತದೆ. ತಾಲೂಕಿನಲ್ಲಿ ಎರಡು ಕುಣಿತ ಭಜನಾ ತಂಡಗಳನ್ನು ರಚಿಸಲಾಗಿದೆ. ಮುಂದೆ ಎಲ್ಲ ಗ್ರಾಮಗಳಲ್ಲೂ ಭಜನಾ ತಂಡಗಳು ಆಗಬೇಕು ಎಂದು ಹೇಳಿದರು.
ಕುಣಿತ ಭಜನೆಯ ತರಬೇತಿ ನೀಡಿದ ಬೆಳ್ತಂಗಡಿ ಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ಕಲಶೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಭಟ್, ಕೆಳಭಾಗ ದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಗದ್ದೆಮನೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮುರಳೀಧರ ಭಟ್, ತಾಲೂಕು ಯೋಜನಾಧಿಕಾರಿ ಸುರೇಶ್, ಕೆಳಭಾಗ ದುರ್ಗಾಪರಮೇಶ್ವರಿ ದೇವಸ್ಥಾನ ಕಾರ್ಯದರ್ಶಿ ಆರ್.ವಿ.ಶಿವರಾಂ, ಉಪೇಂದ್ರ ಗೌಡ, ಸರೋಜಾ, ಸುದರ್ಶನ್ ಇದ್ದರು.