

ಹುಬ್ಬಳ್ಳಿ: ಭಗ್ನಪ್ರೇಮಿಯೊಬ್ಬ ಯುವತಿಯನ್ನು ನಡುರಸ್ತೆಯಲ್ಲೇ ಮಚ್ಚಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಘಟನೆ ಇಲ್ಲಿನ ದೇಶಪಾಂಡೆ ನಗರದ ಪ್ರವಾಸಿ ಮಂದಿರದ ಪಕ್ಕದ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಆಶಾ ದಾವಲಸಾಬ ದೋಬಿ (21) ಹಲ್ಲೆಗೀಡಾದ ಯುವತಿ. ಆಟೋ ಚಾಲಕ ಇಸ್ಮಾಯಿಲ್ ಕಲಂದರಸಾಬ ಕುಂಕೂರ (25) ಹಲ್ಲೆ ನಡೆಸಿದ ಆರೋಪಿ.
ನಡೆದದ್ದೇನು?: ಬೆಳಗ್ಗೆ 10 ಗಂಟೆ ಸುಮಾರಿಗೆ ಆಶಾ ಮನೆಯಿಂದ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದಳು. ಆಕೆಗಾಗಿ ಕಾದು ಕುಳಿತಿದ್ದ ಇಸ್ಮಾಯಿಲ್ ಮಾಸ್ಕ್ ಧರಿಸಿಕೊಂಡು ಬಂದು ಎಳನೀರು ಕತ್ತರಿಸುವ ಮಚ್ಚಿನಿಂದ ಏಕಾಏಕಿ ತಲೆ ಹಾಗೂ ಕುತ್ತಿಗೆ ಭಾಗದಲ್ಲಿ ನಾಲ್ಕು ಬಾರಿ ಜೋರಾಗಿ ಹೊಡೆದಿದ್ದ. ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಮಂಜುನಾಥ ಬೆಳಗಲಿ ಎಂಬುವರು ಹಾಗೂ ಸ್ಥಳೀಯರು ಧೈರ್ಯದಿಂದ ಮುನ್ನುಗ್ಗಿ ಆಕೆಯನ್ನು ರಕ್ಷಿಸಿ, ವಿವೇಕಾನಂದ ಆಸ್ಪತ್ರೆಗೆ ದಾಖಲಿಸಿದರು. ಇಸ್ಮಾಯಿಲ್ನನ್ನು ಪೊಲೀಸರಿಗೆ ಒಪ್ಪಿಸಿದರು. ಸದ್ಯ ಆಶಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಪೊಲೀಸ್ ಆಯುಕ್ತ ಲಾಬುರಾಮ, ಎಸಿಪಿ ವಿನೋದ ಮುಕ್ತೇದಾರ, ಇನ್ಸ್ಪೆಕ್ಟರ್ ಎಸ್.ಕೆ. ಹೊಳೆಯಣ್ಣವರ ವಿವೇಕಾನಂದ ಆಸ್ಪತ್ರೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ‘ಯುವತಿ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು
ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ನವಲಗುಂದ ತಾಲೂಕು ಮೊರಬ ಗ್ರಾಮದ ಆಶಾ ಕೆಲ ವರ್ಷಗಳಿಂದ ತಾಯಿಯೊಂದಿಗೆ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾಳೆ. ತಾಯಿ ಬೀಬಿಜಾನ್ ಮನೆಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದರೆ, ಆಶಾ ದುರ್ಗದಬೈಲ್ನ ಆಭರಣ ಮಳಿಗೆಯೊಂದರ ಉದ್ಯೋಗಿ. ವರ್ಷದ ಹಿಂದೆ ಬೈಕ್ನಿಂದ ಬಿದ್ದು ಕಾಲಿಗೆ ಪೆಟ್ಟಾಗಿದ್ದರಿಂದ ನಿತ್ಯವೂ ಇಸ್ಮಾಯಿಲ್ನ ಆಟೋದಲ್ಲಿ ದುರ್ಗದಬೈಲ್ಗೆ ಹೋಗಿ ಬರುತ್ತಿದ್ದಳು. ಆ ವೇಳೆ ಆಕೆಯ ಮೇಲೆ ಪ್ರೇಮಾಂಕುರವಾಗಿತ್ತು. ಲಾಕ್ಡೌನ್ ವೇಳೆ ಕೆಲಸವಿಲ್ಲದ್ದರಿಂದ ಇಸ್ಮಾಯಿಲ್ ತನ್ನ ಊರು ಕುಂದಗೋಳ ತಾಲೂಕು ರಾಮಾಪುರಕ್ಕೆ ತೆರಳಿದ್ದ. ನಂತರ ಆಶಾ ಆತನ ಪ್ರೀತಿ ನಿರಾಕರಿಸಿ, ಆತನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಳು. ಹೀಗಾಗಿ ಆಕ್ರೋಶಗೊಂಡಿದ್ದ ಇಸ್ಮಾಯಿಲ್ ಸೋಮವಾರ ಬೆಳಗ್ಗೆ ಸಮಯ ಸಾಧಿಸಿ ಆಕೆಯ ಹತ್ಯೆಗೆ ಮುಂದಾಗಿದ್ದ ಎಂದು ತಿಳಿದುಬಂದಿದೆ.
ಯುವತಿ ರಕ್ಷಿಸಿದ ಮಂಜುನಾಥ: ಇಸ್ಮಾಯಿಲ್ ನಡುರಸ್ತೆಯಲ್ಲಿ ಆಶಾಳ ತಲೆಗೆ ಮಚ್ಚಿನಿಂದ ಹೊಡೆಯುತ್ತಿದ್ದಾಗ ಬೈಕ್ನಲ್ಲಿ ಹೊರಟಿದ್ದ ಮಂಜುನಾಥ ಬೆಳಗಲಿ ಎಂಬುವರು ಧಾವಿಸಿ ಆತನ ಕೈ ಹಿಡಿದು ತಡೆದಿದ್ದಾರೆ. ಬಲವಾಗಿ ಹಿಡಿದುಕೊಂಡು ಆತನನ್ನು ಪಕ್ಕಕ್ಕೆ ತಳ್ಳಿಕೊಂಡು ಹೋಗಿ, ಇತರರ ನೆರವಿನಿಂದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೊಡೆದದ್ದು ನಾನೇ: ‘ನಾವು ಪರಸ್ಪರ ಪ್ರೀತಿಸುತ್ತಿದ್ದೆವು. ಲಾಕ್ಡೌನ್ ವೇಳೆ ಒಬ್ಬರಿಗೊಬ್ಬರ ಭೇಟಿ ಸಾಧ್ಯವಾಗಲಿಲ್ಲ. ನಂತರ ಭೇಟಿಯಾಗಿ ಎಷ್ಟು ಹೇಳಿದರೂ ಅವಳು ನನ್ನನ್ನು ಒಪ್ಪಿಕೊಳ್ಳಲಿಲ್ಲ. ಅಲ್ಲದೆ, ಬೇರೊಬ್ಬನನ್ನು ಪ್ರೀತಿಸುತ್ತಿರುವುದು ತಿಳಿದಿತ್ತು. ಹಾಗಾಗಿ ಸಿಟ್ಟು ಬಂದಿತ್ತು. ನಾನೇ ಮಚ್ಚಿನಿಂದ ಹೊಡೆದಿದ್ದೇನೆ’ ಎಂದು ಇಸ್ಮಾಯಿಲ್ ಪೊಲೀಸರೆದುರು ತಪ್ಪೊಪ್ಪಿಕೊಂಡಿದ್ದಾನೆ.