

ಹಾಸನ: ಭಗವಾನ್ ಮಹಾವೀರರು ಶಾಂತಿಯ ಸಂಕೇತವಾಗಿದ್ದು, ಅಹಿಂಸಾ ತತ್ವಗಳನ್ನು ನಮ್ಮೆಲ್ಲರಿಗೂ ಬೋಧಿಸಿದ ಮಹಾನ್ ವ್ಯಕ್ತಿ. ಅವರ ತತ್ವಗಳನ್ನು ನಾವೆಲ್ಲರೂ ಅನುಸರಿಸಿ ಅವರ ಹಾದಿಯಲ್ಲಿಯೇ ನಡೆಯೋಣ ಎಂದು ನಗರಸಭೆಯ ಅಧ್ಯಕ್ಷ ಎಂ. ಚಂದ್ರೇಗೌಡ ಅವರು ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ಮಹಾನ್ ದೊಡ್ಡ ದೊಡ್ಡ ಮೇಧಾವಿಗಳು, ಮಹನೀಯರು ಎಲ್ಲ ಸಮುದಾಯದವರಿಗೂ ಶಾಂತಿ, ಪ್ರೀತಿಯಿಂದ ಜೀವಿಸುವುದಕ್ಕೆ ಬೇಕಾದ ಉತ್ತಮವಾದ ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅವುಗಳನ್ನು ನಾವೆಲ್ಲರೂ ಅನುಸರಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಮುನಿ ಶ್ರೀ ಡಾ. ಪುಲಕಿತ್ ಕುಮಾರ್ ಜೀ ಅವರು, ಕರ್ನಾಟಕ ಸರ್ಕಾರವು ಮಹಾವೀರ ಜಯಂತಿಯನ್ನು ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಮಹಾವೀರರು ಕುಂಡಲಾಪುರದಲ್ಲಿ ಜನಿಸಿದರು. ಹಿಂಸೆಯನ್ನು ವಿರೋಧಿಸುತ್ತಿದ್ದರು. ಅಹಿಂಸೆ, ಕರುಣೆಯ ಭಾವವನ್ನು ಹೊಂದಿದವರಾಗಿದ್ದರು. ಸತ್ಯ, ಅಹಿಂಸೆ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ತತ್ವಗಳನ್ನ ಬೋಧಿಸಿದ್ದಾರೆ. ಧ್ಯಾನದಿಂದ ಆಗುವ ಅನುಕೂಲಗಳ ಕುರಿತು ಮಹಾವೀರರೂ ಉಪದೇಶ ನೀಡಿದ್ದಾರೆ. ಅಹಿಂಸೆಯಿಂದ ನಮಗೆ ಶಾಂತಿ ದೊರಕುತ್ತದೆ ಎಂಬುದಾಗಿ ತಿಳಿಸಿಕೊಟ್ಟಿದ್ದಾರೆ. ಮಹಾವೀರರು ಅಹಿಂಸೆಯ ಅವತಾರ ಪುರುಷ ಎಂದು ಹೇಳಿದರು.
ಕರ್ನಾಟಕದಲ್ಲಿ ಮಹಾನ್ ವ್ಯಕ್ತಿಗಳು ಜನ್ಮ ತಾಳಿದ್ದಾರೆ. ಇದು ಈ ನಾಡಿನ ಹೆಮ್ಮೆಯ ಸಂಗತಿಯಾಗಿದೆ. ಈ ನಾಡಿನ ಮಹಾನ್ ಕವಿ ಕುವೆಂಪು ಅವರು ಕೂಡ ಮಹಾವೀರರ ತತ್ವಗಳಿಂದ ಪ್ರಭಾವಿತರಾಗಿದ್ದವರು ಎಂದು ತಿಳಿಸಿದರು.
ಮುನಿ ಶ್ರೀ ಆದಿತ್ಯ ಕುಮಾರ್ ಜೀ ಅವರು ಮಾತನಾಡಿ, ಮಹಾವೀರರು ಶಾಂತಿ ಮುಕ್ತಿಯ ಕುರಿತಾಗಿ ತಿಳಿಸಿದ್ದಾರೆ. ಶಾಂತಿಯ ಸಿದ್ಧಾಂತ, ಸಮೃದ್ಧಿಯ ಸಿದ್ಧಾಂತ , ಸಮಾಧಾನದ ಸಿದ್ಧಾಂತ ಹೀಗೆ ಅನೇಕ ಸಿದ್ಧಾಂತಗಳನ್ನು ನಮಗೆ ಮಹಾವೀರರು ತಿಳಿಸಿಕೊಟ್ಟಿದ್ದಾರೆ. ರವೀಂದ್ರನಾಥ ಠಾಕೂರ್ ಅವರು ಕೂಡ ಅಹಿಂಸಾ ತತ್ವದ ಕುರಿತು ಮಹಾವೀರರು ಹೇಳಿರುವ ಅಂಶಗಳನ್ನು ತಮ್ಮ ಸಾಹಿತ್ಯದ ಮೂಲಕ ತಿಳಿಸಿದ್ದಾರೆ ಎಂದರು.
ಜಿಲ್ಲಾ ಕೇಂದ್ರೀಯ ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ್ ಪಡೆಸೂರ್ ಅವರು ಮಾತನಾಡಿ ಮಹಾವೀರರು ಕ್ರಿ.ಪೂ. 599ರ ಕಾಲಘಟ್ಟದಲ್ಲಿ ಜನಿಸಿದವರು, ಇವರು 30 ವರ್ಷಗಳ ಕಾಲ ರಾಜಪುತ್ರರಾಗಿ ಆಳ್ವಿಕೆ ಮಾಡಿ ತದನಂತರದಲ್ಲಿ ಸಂಸಾರ ತ್ಯಾಗ ಮಾಡಿ ಕೇವಲ ಜ್ಞಾನವನ್ನು ಪ್ರಾಪ್ತಿ ಮಾಡಿಕೊಂಡರು. ಇವರು ಭರತ ಚಕ್ರವರ್ತಿಯ ಮಗನಾಗಿ ಬಾಹುಬಲಿಯ ಮಗನಾಗಿ ಹೀಗೆ ಅನೇಕ ಭಾವಗಳಲ್ಲಿ ಜನ್ಮ ತಾಳಿದ್ದಾರೆ ಎಂಬುದಾಗಿ ಗ್ರಂಥಗಳಲ್ಲಿ ತಿಳಿಸಲಾಗಿದೆ. 23ನೇ ತೀಥರ್ಂಕರರಾದ ಪಾರ್ಶ್ವನಾಥರಿಂದ ಜೈನ ಧರ್ಮ ಸ್ಥಾಪಿತವಾಯಿತು ಎಂಬುದಾಗಿ ನಾವು ತಿಳಿದುಕೊಂಡಿದ್ದೇವೆ. ಆದರೆ ಧರ್ಮಕ್ಕೆ ಸ್ಪಷ್ಟ ರೂಪುರೇಷೆ ನೀಡಿದವರು ಮಹಾವೀರರಾಗಿದ್ದಾರೆ ಹಾಗೂ ಇವರು ಪ್ರಕೃತಿಯನ್ನು ಷಡ್ ದ್ರವ್ಯಗಳೆಂದು ಕರೆದಿದ್ದಾರೆ ಎಂದು ತಿಳಿಸಿದರು.
ಜೈನರು ದೇವರು ಎಂಬ ತತ್ವದಲ್ಲಿ ನಂಬಿಕೆ ಇಡುವುದಿಲ್ಲ. ಅವರು ತಮ್ಮ ಆತ್ಮದಲ್ಲೇ ದೇವರನ್ನು ಕಾಣುವವರಾಗಿದ್ದಾರೆ. ಈ ಧರ್ಮದಲ್ಲಿ ಸಮ್ಯ ಜ್ಞಾನ ಸಮ್ಯ ದರ್ಶನ ಸಂಚಾರಿತ್ರ್ಯ ಎಂಬ ರತ್ನತ್ರಯಗಳನ್ನು ನೋಡಬಹುದು. ಬ್ರಹ್ಮಚರ್ಯ, ಸತ್ಯ, ಅಹಿಂಸೆ, ಆಸ್ತೇಯ ಎಂಬ ತತ್ವಗಳ ಕುರಿತಾಗಿ ಮಹಾವೀರರು ಬೋಧಿಸಿದ್ದಾರೆ ಎಂದು ಮಹಾವೀರರ ಜೀವನದ ಕುರಿತಾಗಿ ಸವಿವರವಾಗಿ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಮುದಾಯದ ಮಕ್ಕಳು ಮಹಾವೀರರ ಜನನದ ಕುರಿತು ನಾಟಕ ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಹುಲಿವಾಲ ಮೋಹನ್ ಕುಮಾರ್, ಡಿವೈಎಸ್‌ಪಿ ಮುರಳೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ ತಾರಾನಾಥ್, ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಗೌವಾಧ್ಯಕ್ಷ ಈ.ಕೃಷ್ಣೇಗೌಡ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.