

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಭಗವದ್ಗೀತೆಯನ್ನು ನಿರಂತರವಾಗಿ ಅಧ್ಯಯನ ಮಾಡಬೇಕು. ಅದು ಜೀವನಕ್ಕೆ ಬಹುದೊಡ್ಡ ಮೌಲ್ಯಯುತ ಸಂದೇಶ ನೀಡುವ ಗ್ರಂಥ. ಸತತ ಅಧ್ಯಯನದಿಂದ ಸಂಸ್ಕಾರ, ಮೋಕ್ಷ ಪ್ರಾಪ್ತಿ ಆಗಲಿದೆ ಎಂದು ನಂದೂ ಕೆಮಿಕಲ್ಸ್ನ ಮುಖ್ಯಸ್ಥೆ ಉಷಾ ಹೆಗಡೆ ಹೇಳಿದರು.
ನಗರದ ಗೋಕುಲ ರಸ್ತೆಯ ಗಾಂಧಿನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಗೀತಾ ಜಯಂತಿ ಮಹೋತ್ಸವ ಸಪ್ತಾಹದಲ್ಲಿ ಅವರು ಶನಿವಾರ ಉಪನ್ಯಾಸ ನೀಡಿದರು.
ನಾವು ಯಾವ ಮನೋಭಾವವನ್ನಿಟ್ಟುಕೊಂಡು ಅಧ್ಯಯನ ಮಾಡುತ್ತೇವೆಯೋ ಅದೇ ಫಲ ನಮಗೆ ಲಭಿಸುತ್ತದೆ. ಗೀತೆಯ ಸಂದೇಶವನ್ನು ಎಲ್ಲರೂ ಕೇಳಿರಬಹುದು. ಆದರೆ, ಫಲ ಅವರು ಬಯಸಿದಂತೆ ಸಿಕ್ಕಿದೆ. ಗೀತೆಯ ಪಠಣ ಹಾಗೂ ಗಂಗೋಧಕ ಸೇವಿಸಿದವರಿಗೆ ಯಮನಿಂದಲೂ ಕೂಡ ಭಯವಿಲ್ಲ ಎಂದರು.
ಮನುಷ್ಯ ಜನ್ಮ ಲಭಿಸುವುದು ದುರ್ಲಭ. ಸಿಕ್ಕ ಜನ್ಮದಲ್ಲಿ ಪರೋಪಕಾರಕ್ಕಾಗಿಯೇ ಜೀವಿಸಬೇಕು. ಧ್ಯಾನ, ಯಜ್ಞ, ಪೂಜೆ ಮೂಲಕ ದೇವರ ಆರಾಧನೆ ಮಾಡಬೇಕು. ಮನೆ-ಮನದಲ್ಲಿ ಸಂಸ್ಕಾರದ ಬೀಜ ಬಿತ್ತಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಉಪನ್ಯಾಸಕಿ ಪ್ರೇಮಾ ಹೆಗಡೆ, ಉಷಾ, ಲತಾ ಇತರರು ಇದ್ದರು.