ಭಗವಂತನ ಒಲಿಸಿಕೊಳ್ಳಲು ಭಕ್ತಿಯೊಂದೇ ದಾರಿ; ಸಮಸ್ಯೆಗಳಿಗೆ ಹರಿ ನಾಮಸ್ಮರಣೆ ಪರಿಹಾರ: ಡಾ. ಗುರುರಾಜ್ ಕಲ್ಲಾಪುರ್

WEBBBBBBBBBB SGR
Published on

ಸಾಗರ: ಭಗವಂತನನ್ನು ಒಲಿಸಿಕೊಳ್ಳಲು ಭಕ್ತಿಯೊಂದೇ ದಾರಿ. ಕಲಿಯುಗದಲ್ಲಿ ಹರಿನಾಮ ಸ್ಮರಣೆಯಿಂದ ಎಂತಹ ಸಮಸ್ಯೆಗಳಿಂದಲೂ ಹೊರಬರಬಹುದು ಎಂಬುದನ್ನು ಆಚಾರ್ಯ ಮಧ್ವರು ತೋರಿಸಿಕೊಟ್ಟಿದ್ದಾರೆ ಎಂದು ಮಾಧ್ವ ಸಂಘದ ಅಧ್ಯಕ್ಷ ಡಾ. ಗುರುರಾಜ್ ಕಲ್ಲಾಪುರ್ ಹೇಳಿದರು.

ಮಧ್ವನವಮಿಯ ಅಂಗವಾಗಿ ನಗರದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿದ್ದ ಸುಮಧ್ವ ವಿಜಯ ಪಾರಾಯಣ ಹಾಗೂ ಮಧ್ವಾಚಾರ್ಯರ ಗ್ರಂಥಗಳ ಕುರಿತ ಉಪನ್ಯಾಸದಲ್ಲಿ ಸೋಮವಾರ ಸಮಾರೋಪ ಭಾಷಣ ಮಾಡಿದರು.

ಮಧ್ವಾಚಾರ್ಯರು ತಮ್ಮ ಸಿದ್ಧಾಂತದ ಪ್ರತಿಪಾದನೆಯ ಮೂಲಕವೇ ಜನರ ಗಮನ ಸೆಳೆದರು, ಕರ್ನಾಟವೇ ಆಚಾರ್ಯರಿಗೆ ಕರ್ಮಭೂಮಿಯಾಯಿತು. ಭಕ್ತಿ ಎಂದರೆ ಏನು? ಭಗವಂತನ ಸಾಕ್ಷಾತ್ಕಾರ ಆಗಬೇಕಾದರೆ ಭೂಮಿಯ ಮೇಲೆ ನಾವು ಹೇಗೆ ಬದುಕಬೇಕು. ಎಲ್ಲವನ್ನು ಆಚಾರ್ಯರು ಎಳೆಎಳೆಯಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.

ಭಕ್ತಿಮಾರ್ಗದ ಪ್ರವರ್ತಕರೆಂದೇ ಆಚಾರ್ಯ ಮಧ್ವರನ್ನು ಅಧ್ಯಾತ್ಮ ಕ್ಷೇತ್ರದಲ್ಲಿ ಗುರುತಿಸಲಾಗುತ್ತದೆ. ಶ್ರೀ ಪಂಡಿತ ನಾರಾಯಣಾಚಾರ್ಯರ ಸುಮಧ್ವ ವಿಜಯ ಗ್ರಂಥದ ಮೂಲಕ ಆಚಾರ್ಯರ ಸಮಗ್ರ ಚಿತ್ರಣವನ್ನು ನಮಗೆ ಪರಿಚಯಿಸುತ್ತದೆ, ಮಧ್ವಾಚಾರ್ಯರು ಉಪದೇಶಿಸಿದ ಪಂಚಭೇದದ ತಾರತಮ್ಯದ ವಿಚಾರಗಳು ಸೈದ್ಧಾಂತಿಕವಾಗಿ ಮೂಡಿದೆ. ಮಧ್ವಾಚಾರ್ಯರ ಗ್ರಂಥಗಳ ಅಧ್ಯಯನ ಮತ್ತು ಅವರ ಕೆಲಸಗಳ ಕುರಿತು ಇನ್ನಷ್ಟು ಸಂಶೋಧನೆಗಳಾಗಬೇಕಾದ ಅವಶ್ಯಕತೆ ಇದೆ. ಯುವ ಜನರಿಗೆ ಅಧ್ಯಾತ್ಮದ ವಿಚಾರದಲ್ಲಿ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಮಧ್ವಾಚಾರ್ಯರ ಗ್ರಂಥಗಳ ಅಧ್ಯಯನದಲ್ಲಿ ಯುವಜನರು ಹೆಚ್ಚಿನ ಆಸಕ್ತಿವಹಿಸುವಂತಾಗಬೇಕು ಎಂದು ಸಲಹೆ ನೀಡಿದರು.

ವೈ.ಮೋಹನ್ ಮಾತನಾಡಿ, ಭಕ್ತಿ, ಜ್ಞಾನ, ವೈರಾಗ್ಯದ ಕೀರ್ತನೆಗಳನ್ನು ದಾಸವರೇಣ್ಯರು ನಮಗೆ ನೀಡಿದ್ದಾರೆ. ಅವುಗಳನ್ನು ವೈಷ್ಣವಿ ಅವರು ನಿರಂತರವಾಗಿ ಹಾಡುವ ಮೂಲಕ ಭರವಸೆಯ ಗಾಯಕಿಯಾಗಿ ಹೊರಹೊಮ್ಮುತ್ತಿದ್ದಾರೆ. ಅಲ್ಲದೇ ನಾಡಿನ ಅನೇಕ ಮಠ ಮಾನ್ಯಗಳು ಅವರ ಪ್ರತಿಭೆ ಗುರುತಿಸಿ ಗೌರವಿಸಿವೆ. ಸಮಾಜ ನಮ್ಮ ಸುತ್ತಮುತ್ತಲಿರುವ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಮಧ್ವನವಮಿಯ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಭಜನೆ, ಕೀರ್ತನ ಗಾಯನ, ಮಂತ್ರಪಠಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅಧ್ಯಾತ್ಮ ಕ್ಷೇತ್ರಕ್ಕೆ ಮಧ್ವಾಚಾರ್ಯರು ನೀಡಿದ ಕೊಡುಗೆ ಕುರಿತು ಚಿಂತನ ಮಂಥನ ನಡೆಸಲಾಯಿತು.

ಧಾರವಾಡದ ಆಕಾಶವಾಣಿಯ ಶ್ರೇಣಿಕೃತ ಕಲಾವಿದೆ ಸಾಗರದ ವೈಷ್ಣವಿ ಪಂಚಮುಖಿ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net