

ಚಿತ್ರದುರ್ಗ: ಪ್ರತಿಫಲಾಪೇಕ್ಷೆ ಬಯಸದ ಭಕ್ತಿಗೆ ಬಹುಬೇಗ ಮೆಚ್ಚುವ ಭಗವಂತ ಸದಾ ಕರುಣಾಮಯಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ಸನ್ನಿಧಾನದ ರಜತ ಮಹೋತ್ಸವ, 2ನೇ ಮಹಾಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಸಮುದಾಯ ಒಂದೊಂದು ಹೆಸರಿನಲ್ಲಿ ಭಗವಂತನ ನಾಮಸ್ಮರಣೆ ಮಾಡುತ್ತ ಆತನನ್ನು ಆರಾಧಿಸುತ್ತಾರೆ. ಹೀಗಾಗಿ ದೇವನೊಬ್ಬ ನಾಮ ಹಲವು ಎಂಬುದನ್ನು ಹಿರಿಯರಿಂದ ತಿಳಿದಿದ್ದೇವೆ ಎಂದರು.
ಅಯ್ಯಪ್ಪ ಸರ್ವ ಸಮುದಾಯದವರೂ ಪ್ರೀತಿಸುವ ದೈವ. ಎಲ್ಲೇ ಆಗಲಿ ಜಾತಿ ಮುಖ್ಯವಲ್ಲ. ಭಕ್ತಿಯೇ ಮುಖ್ಯ. ಭಾರತ ಧಾರ್ಮಿಕ ತಳಹದಿಯ ಮೇಲೆ ನಿಂತಿರುವ ದೇಶ. ಇಲ್ಲಿ ದೇವರ ಮೇಲೆ ಅಪಾರ ನಂಬಿಕೆ ಇದೆ. ಅದೇ ರೀತಿ ಎಲ್ಲ ಧರ್ಮಗಳು ಜಗತ್ತಿಗೆ ಒಳಿತನ್ನೇ ಬಯಸುತ್ತವೆ. ಆ ಹಾದಿಯಲ್ಲಿ ಸಾಗಿದರೆ, ಸಮಾಜ ಸುಂದರವಾಗಲಿದೆ ಎಂದು ಸಲಹೆ ನೀಡಿದರು.
ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ 25 ವರ್ಷದಿಂದಲೂ ಶ್ರದ್ಧಾ, ಭಕ್ತಿಯಿಂದ ಧಾರ್ಮಿಕ ಕಾರ್ಯ ಮುಂದುವರೆಸಿದ್ದಾರೆ. ಇದು ಭಕ್ತರನ್ನು ಆಕರ್ಷಿಸುವ ಕೇಂದ್ರವಾಗಿದ್ದು, ಸ್ವಾಮಿಯ ದಯೆಯಿಂದ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.
ದಿ ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ ಮಾತನಾಡಿ, ನಿಸ್ವಾರ್ಥ ಸೇವೆಗೆ ರಾಜ್ಯದಲ್ಲೇ ಚಿತ್ರದುರ್ಗದ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಹೆಸರಾಗಿದೆ. ಯಾತ್ರಾರ್ಥಿಗಳಿಗೆ, ಮಾಲಾಧಾರಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಭಕ್ತರ ಸಹಕಾರದಿಂದ ದೇಗುಲ ಖ್ಯಾತಿ ಗಳಿಸುತ್ತಿದೆ ಎಂದರು.
ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದ್ಯಾಮಣ್ಣ, ನಿಶಾನಿ ಜಯಣ್ಣ, ಟಿ.ಮಹಾಂತೇಶ್, ಮೆದೇಹಳ್ಳಿ ಗ್ರಾಪಂ ಸದಸ್ಯರಾದ ನಿರಂಜನಮೂರ್ತಿ, ದುಗ್ಗಪ್ಪ, ಮೊತ್ಕೂರ್ ರಮೇಶ್, ಮಾಜಿ ಅಧ್ಯಕ್ಷ ವಿಜಯಕುಮಾರ್, ವಿವಿಧ ಸಮುದಾಯದ ಮುಖಂಡರಾದ ಎಸ್.ಎನ್.ಕಾಶಿ ವಿಶ್ವನಾಥ ಶ್ರೇಷ್ಠಿ, ಹರೀಶ್, ಮೋಹನರಾಜ್, ಚಳ್ಳಕೆರೆ ರಘು, ಮಲ್ಲಿಕಾರ್ಜುನ ಸ್ವಾಮಿ, ಮೋಹನ್‌ಕುಮಾರ್, ಚಂದ್ರಶೇಖರ್, ಸೂರಪ್ಪ, ಮಂಜುನಾಥ್, ಪ್ರಧಾನ ಅರ್ಚಕ ಸತೀಶ್ ಶರ್ಮಾ ಇತರರಿದ್ದರು.