

ದೊಡ್ಡಬಳ್ಳಾಪುರ: ದಿನಸಿ ಕಿಟ್‌ಗಾಗಿ ನೂರಾರು ವಾಹನಗಳು ನುಗ್ಗಿದ್ದರಿಂದ ನಗರದ ಭಗತ್‌ಸಿಂಗ್ ಕ್ರೀಡಾಂಗಣ ಕೆಸರು ಮಯವಾಗಿದ್ದು, ರನ್ನಿಂಗ್ ಟ್ರ್ಯಾಕ್‌ಗೂ ಹಾನಿಯಾಗಿದೆ.
ತಾಲೂಕು ಕಾಂಗ್ರೆಸ್‌ನಿಂದ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಇತ್ತೀಚೆಗೆ ಆಟೋ ಹಾಗೂ ಕ್ಯಾಬ್ ಚಾಲಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಭಾಗವಹಿಸಿದ್ದರು.
ಕ್ರೀಡಾಂಗಣಕ್ಕೆ 900ಕ್ಕೂ ಹೆಚ್ಚು ವಾಹನಗಳು ಆಗಮಿಸಿದ್ದ ಪರಿಣಾಮ ಮೈದಾನವೆಲ್ಲ ಕೆಸರುಮಯವಾಗಿದ್ದು ರನ್ನಿಂಗ್ ಟ್ರ್ಯಾಕ್‌ಗೆ ಕೂಡ ಹಾನಿಯಾಗಿದೆ. ಆಯೋಜಕರು ಕಾರ್ಯಕ್ರಮಕ್ಕೆ ವಾಹನ ತಂದವರಿಗೆ ಮಾತ್ರ ಕಿಟ್ ವಿತರಣೆ ಮಾಡುವುದಾಗಿ ಹೇಳಿದ್ದರಿಂದ ಚಾಲಕರು ಕ್ರೀಡಾಂಗಣಕ್ಕೆ ವಾಹನ ತಂದಿದ್ದರು. ನಗರದ 500 ಆಟೋಗಳು ಸೇರಿ 900ಕ್ಕೂ ಹೆಚ್ಚು ವಾಹನಗಳು ಒಮ್ಮೆಲೆ ಕ್ರೀಡಾಂಗಣಕ್ಕೆ ನುಗ್ಗಿದ್ದರಿಂದ ಮೊದಲೇ ಮಳೆ ನೀರು ನಿಂತಿದ್ದ ಮೈದಾನ ಕೆಸರು ಗದ್ದೆಯಾಗಿ ಬದಲಾಗಿದೆ.
ಕ್ರೀಡಾಂಗಣದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಟ್ರ್ಯಾಕ್, ರಾಜಕೀಯ ಕಾರ್ಯಕ್ರಮದಿಂದ ಹಾನಿಯಾಗಿದೆ. ಇನ್ನೊಮ್ಮೆ ಕ್ರೀಡಾಂಗಣವನ್ನು ರಾಜಕೀಯ ಕಾರ್ಯಕ್ರಮಕ್ಕೆ ಕೊಟ್ಟಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಕನ್ನಡಪರ ಸಂಘಟನೆ ಮುಖಂಡ ಚಂದ್ರಶೇಖರ್ ಎಚ್ಚರಿಸಿದ್ದಾರೆ.
ಇನ್ನು ಆಯೋಜಕರ ವಿರುದ್ಧ ನವ ಬೆಂಗಳೂರು ಹೋರಾಟ ಸಮಿತಿ ಸಂಸ್ಥಾಪಕ ಜಿ.ಎನ್.ಪ್ರದೀಪ್ ಸೂಕ್ತ ಕಾನೂನು ಕ್ರಮಕ್ಕೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ದೂರು ನೀಡಿದ್ದಾರೆ.
ಕ್ರೀಡಾಂಗಣ ಹಾಳಾಗಿರುವ ಕುರಿತು ದೂರು ಬಂದಿವೆ. ಕ್ರೀಡಾಂಗಣದಲ್ಲಿ ನೀರು ಇಂಗಲಿ, ನಿರಂತರ ಮಳೆಯ ಕಾರಣ ದುರಸ್ತಿಗೆ ತೊಂದರೆಯಾಗಿದೆ. ಎಂ ಸ್ಯಾಂಡ್ ತರಲು ಸೂಚಿಸಿರುವುದಾಗಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದ್ದಾರೆ. ಮಳೆ ನಿಂತರೆ ಕ್ರೀಡಾಂಗಣ ದುರಸ್ತಿ ಕಾರ್ಯ ಮಾಡಲಾಗುತ್ತದೆ. ಗೀತಾ, ಜಿಲ್ಲಾ ಸಹಾಯಕ ನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ