

ಚಿತ್ರದುರ್ಗ:ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದ, ಸಾವು ನಾಚುವಂತೆ ಗಲ್ಲು ಕಂಬಕ್ಕೆ ಕೊರಳಿಡ್ಡಿದ ಭಗತ್‌ಸಿಂಗ್ ಧೈರ್ಯ,ದೇಶಭಕ್ತಿ,ಕಿಚ್ಚುನಾಡಿನ ಯುವ ಪೀಳಿಗೆಗೆ ಆದರ್ಶ ಆಗಬೇಕು ಎಂದು ಎಐಡಿವೈಒ ರಾಜ್ಯ ಉಪಾಧ್ಯಕ್ಷ ಕೃಷ್ಣ ಹೇಳಿದರು.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಒ)ವತಿಯಿಂದ ನಗರದ ಭಗತ್‌ಸಿಂಗ್ ಉದ್ಯಾನದಲ್ಲಿ ಗುರುವಾರ ಆಯೋಜಿಸಿದ್ದ ಭಗತ್‌ಸಿಂಗ್ 117ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಭಗತ್‌ಸಿಂಗ್ ಹೆಸರು ಕೇಳಿದರೆ ಮೈ ನವಿರೇಳುತ್ತದೆ. ಚಿಕ್ಕ ವಯಸ್ಸಿನಲ್ಲೇ ಅವರ ಮನಸ್ಸಿನ ಮೇಲೆ ಜಲಿಯನ್ ವಾಲಾಬಾಗ್ ಘಟನೆ ಗಾಢ ಪರಿಣಾಮ ಬೀರಿತ್ತು. ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಅವರ ಮನಸ್ಸು ಸಿಡಿದು ನಿಂತಿತ್ತು ಎಂದರು.
ಕೊಲೆ ಪ್ರಕರಣದ ನೆಪದಲ್ಲಿ ಬ್ರಿಟಿಷರು ಭಗತ್‌ಸಿಂಗ್ ಹಾಗೂ ಸಹಯೋಧರಾದ ಸುಖದೇವ್, ರಾಜ್‌ಗುರು ಅವರನ್ನು ಗಲ್ಲಿಗೇರಿಸಿದರು. ಭಗತ್‌ಸಿಂಗ್ ಹೊತ್ತಿಸಿದ್ದ ಸ್ವಾತಂತ್ರೃ ಹೋರಾಟದ ಕಿಡಿ ದೇಶದ ತುಂಬ ಜ್ವಾಲೆಯಾಗಿ ಹಬ್ಬಿತು. ಅಂದಿನಿಂದ ಅವರು ಜನರ ಎದೆಯಲ್ಲಿ ಧೀರ ಹುತಾತ್ಮರಾಗಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಐಯುಟಿಯುಸಿ ಮುಖಂಡ ರವಿಕುಮಾರ್ ಮಾತನಾಡಿ, ಸ್ವಾತಂತ್ರೃ ದೊರೆತು 76 ವರ್ಷಗಳಾದರೂ ದೇಶದಲ್ಲಿ ಬಡತನ, ಅನಕ್ಷರತೆ, ದುಬಾರಿ ಆರೋಗ್ಯ ವೆಚ್ಚ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಪ್ರಜಾತಾಂತ್ರಿಕ ಹಕ್ಕುಗಳ ದಮನ ಮೊದಲಾದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಭಗತ್‌ಸಿಂಗ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ನಾವೆಲ್ಲರೂ ಪಣ ತೊಡ ಬೇಕಿದೆ ಎಂದರು.
ಸಭಾ ಕಾರ‌್ಯಕ್ರಮದ ಬಳಿಕ ಸಂಘಟನೆಯ ಕಚೇರಿಯಲ್ಲಿ ಭಗತ್‌ಸಿಂಗ್ ಅವರ ಜೀವನಾಧಾರಿತ ‘ದಿ ಲೆಜೆಂಡ್ ಆಫ್ ಭಗತ್‌ಸಿಂಗ್’ ಸಿನಿಮಾದ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಲಾಗಿತ್ತು.
ಎಐಡಿವೈಒ ರಾಜ್ಯ ಉಪಾಧ್ಯಕ್ಷ ವಿಜಯ್‌ಕುಮಾರ್, ಪವನ್, ನಿಂಗರಾಜು, ಲೋಹಿತ್, ಪ್ರಸನ್ನ, ಆಂಜನೇಯ, ಪದ್ಮಶ್ರೀ, ಸುಷ್ಮಿತಾ, ಬಸವರಾಜು, ಅಭಿ, ವಿಶ್ವನಾಥ್, ರಾಮಚಂದ್ರರಾವ್, ರಾಮಲಿಂಗಪ್ಪ, ಸೋಮಶೇಖರ್, ತಿಪ್ಪೇಸ್ವಾಮಿ ಮತ್ತಿತರರು ಇದ್ದರು.