

ಬೀದರ್: ಸ್ವಾತಂತ್ರೃ ಚಳವಳಿಗೆ ಹೊಸ ರೂಪ ಕೊಟ್ಟ ಭಗತ್ ಸಿಂಗ್ ಅವರ ಚಿಂತನೆ, ಆದರ್ಶಗಳನ್ನು ಪಾಲಿಸುವ ಮೂಲಕ ಯುವ ಸಮೂಹ ದೇಶದ ರಕ್ಷಣೆಗೆ ಸನ್ನದ್ಧರಾಗಬೇಕು ಎಂದು ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ತ್ಯಾ) ಕರೆ ನೀಡಿದರು.
ಭಗತ್ ಸಿಂಗ್ ಯುಥ್ ಬ್ರಿಗೇಡ್ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಗತ್ ಸಿಂಗ್ ಅವರ 113ನೇ ಜನ್ಮ ದಿನೋತ್ಸವದಲ್ಲಿ ಮಾತನಾಡಿ, ದೇಶಪ್ರೇಮ ಹೇಗಿರಬೇಕು ಎಂಬುದಕ್ಕೆ ಭಗತ್ ಸಿಂಗ್ ಅವರಂಥ ಉದಾಹರಣೆ ಮತ್ತೊಂದಿಲ್ಲ. ಆಗ ಸ್ವಾತಂತ್ರೃಕ್ಕೆ ಭಗತ್ ಸೇರಿ ಅನೇಕ ಹೋರಾಟಗಾರರು ನಗುನಗುತ್ತ ಹುತಾತ್ಮರಾದರು. ಇಂದು ಅವರು ಕೊಟ್ಟ ಸ್ವಾತಂತ್ರೃ ಸಂರಕ್ಷಿಸಿ, ದೇಶವನ್ನು ಸದೃಢಗೊಳಿಸಲು ಪ್ರತಿಯೊಬ್ಬರೂ ಸರ್ವ ತ್ಯಾಗಕ್ಕೆ ಸಿದ್ಧರಾಗುವ ಸಂಕಲ್ಪ ಮಾಡಬೇಕಿದೆ ಎಂದರು.
ಬ್ರಿಗೇಡ್ ಅಧ್ಯಕ್ಷ ಜಸ್ ಪ್ರೀತ ಸಿಂಗ್ ಮೊಂಟಿ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಗುರುದ್ವಾರದ ಬಾಬಾ ಚರಣಸಿಂಗ್, ಪ್ರಮುಖರಾದ ಪುಷ್ಪಕ್ ಜಾಧವ್, ಪಪ್ಪು ಪಾಟೀಲ್ ಖಾನಾಪುರ ಇದ್ದರು. ಜಿಲ್ಲೆಯಲ್ಲಿ ಈವರೆಗೆ 79 ಕರೊನಾ ಸೋಂಕಿತರ ಅಂತ್ಯಕ್ರಿಯೆ ನಡೆಸಿರುವ ಮಾಜೀದ್ ಬಿಲಾಲ್ ನೇತೃತ್ವದ ತಂಡವನ್ನು ಸತ್ಕರಿಸಿ ಅಭಿನಂದಿಸಲಾಯಿತು.
ಎಸ್ಎಫ್ಐ: ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್ಎಫ್ಐ) ಜಿಲ್ಲಾ ಸಮಿತಿಯಿಂದ ಭಗತ್ ಸಿಂಗ್ ವೃತ್ತದಲ್ಲಿ ಜನ್ಮದಿನ ನಿಮಿತ್ತ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಎಸ್ಎಫ್ಐ ಜಿಲ್ಲಾಧ್ಯಕ್ಷ ಅರುಣ ಕೊಡಗೆ, ವಿಜಯಕುಮಾರ ಸೋನಾರೆ ಮಾತನಾಡಿದರು.
ಸಂಚಾರ ಸಿಪಿಐ ವಿಜಯಕುಮಾರ ಬಿರಾದಾರ, ಪ್ರಮುಖರಾದ ಆದೀಶ್ ರಜನೀಶ್ ವಾಲಿ, ಅಮರ್ ಗಾದಗಿ, ಅವಿನಾಶ ಪಾಟೀಲ್, ಸುನೀಲ ಭಾವಿಕಟ್ಟಿ, ಸಚಿನ್ ಮಲ್ಕಾಪುರೆ, ಸೂರಜ್ ಚಿದ್ರೆ, ಇಮಾನ್ವೆಲ್ ಮಂದಕನಳ್ಳಿ, ರೋಷನ್ ಮಲ್ಕಾಪುರೆ, ಸೈಯದ್ ಖಿಜರ್, ನಿಖಿಲ್, ಉಮೇಶ ಲಾಡಗೇರೆ, ನಾಗೇಶ ಹೂಗಾರ ಇತರರಿದ್ದರು.
ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಎಲ್ಲರಿಗೂ ರಾಷ್ಟ್ರ ಧರ್ಮವೇ ಶ್ರೇಷ್ಠವಾಗಬೇಕು. ಇಂದಿನ ಯುವಕರಲ್ಲಿ ದೇಶಪ್ರೇಮ ಕೊರತೆ ಕಾಣುತ್ತಿರುವುದು ದುರದೃಷ್ಟಕರ. ಭಗತ್ ಸಿಂಗ್ ಸೇರಿ ರಾಷ್ಟ್ರಕ್ಕಾಗಿ ಹುತಾತ್ಮರಾದವರ ಜೀವನ ಚರಿತ್ರೆ ಓದಬೇಕು. ರಾಷ್ಟ್ರಕ್ಕಾಗಿ ಬದುಕುವ ಪಣ ತೊಟ್ಟರೆ ದೇಶ ಸಮೃದ್ಧ, ಸಶಕ್ತವಾಗಲು ಸಾಧ್ಯ.| ಜಸ್ ಪ್ರೀತ ಸಿಂಗ್ ಮೊಂಟಿಭಗತ್ ಯುಥ್ ಬ್ರಿಗೇಡ್ ಅಧ್ಯಕ್ಷ
ಸ್ವಾತಂತ್ರ್ಯದ ಕಿಚ್ಚು
ಹೊತ್ತಿಸಿದ ಭಗತ್
ಔರಾದ್: ಭಗತ್ ಸಿಂಗ್ ಬದುಕಿದ್ದು 23 ವರ್ಷ. ಆದರೆ ಅವರು ಸ್ವಾತಂತ್ರ್ಯದ ಕ್ರಾಂತಿ ಕಿಚ್ಚು ದೇಶದ ಕೋಟ್ಯಂತರ ಯುವ ಸಮುದಾಯದ ಎದೆಯೊಳಗೆ ಹೊತ್ತಿಸಿದ್ದರು ಎಂದು ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ನವೀಲಕುಮಾರ ಉತ್ಕಾರ್ ಹೇಳಿದರು. ಸಂತಪುರದಲ್ಲಿ ಸೋಮವಾರ ಭಗತ್ ಸಿಂಗ್ ಜಯಂತ್ಯುತ್ಸವದಲ್ಲಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಹೆಸರು ಭಗತ್ ಸಿಂಗ್. ಯುವಕರಿಗೆ ಭಗತ್ ಚಿಂತನೆ ಸದಾ ಸ್ಫೂರ್ತಿ ನೀಡುತ್ತದೆ ಎಂದರು. ಮುಖ್ಯ ಗುರು ಗುರುಪ್ರೀತ್ ಕೌರ್, ವಿಜಯಕುಮಾರ, ಮಾಯಾದೇವಿ ಕುಲಕರ್ಣಿ ಇತರರಿದ್ದರು.