ಭಕ್ತೀಗಿತೆ ಹಾಕಿದ್ದಕ್ಕೆ ಅನ್ಯಕೋಮಿನಿಂದ ಆವಾಜ್​

01 04
Published on

ಮಧುಗಿರಿಯಲ್ಲಿ ಟನೆ ಶಾಂತಿ ಕಾಪಾಡಲು ಉಭಯ ಗುಂಪುಗಳ ಸಮ್ಮತಿ

ಮಧುಗಿರಿ: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಧುಗಿರಿ ಪಟ್ಟಣದ 7ನೇ ವಾರ್ಡ್​ನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಕ್ತೀಗಿತೆ ಹಾಕಿದ್ದಕ್ಕೆ ಅನ್ಯಕೋಮಿನ ಯುವಕರು ದೇವಸ್ಥಾನದ ಬಳಿ ಆಗಮಿಸಿ ಬಾಲಕನೊಬ್ಬನಿಗೆ ಆವಾಜ್​ ಹಾಕಿದ್ದಾರೆ. ಲಿಂಗೇನಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಭಕ್ತೀಗಿತೆ ಹಾಕಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಪಾರ್ಕಿನಲ್ಲಿದ್ದ ಕೆಲ ಅನ್ಯಕೋಮಿನ ಯುವಕರು ದೇವಸ್ಥಾನದ ಬಳಿ ಬಂದು "ಸೌಂಡ್​ ಕಡಿಮೆ ಇಡು, ಇರೋ ಬರೋ ಸೌಂಡ್​ ಎಲ್ಲ ಇಟ್ಟಿದ್ದೀಯಾ...' ಎಂದು ದೇವಸ್ಥಾನದಲ್ಲಿರುವ ಬಾಲಕನಿಗೆ ಅವಾಜ್​ ಹಾಕಿದ್ದಾರೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ಸೋಮವಾರ ಮತ್ತೆ ಎರಡೂ ಕೋಮಿನ ನಡುವೆ ಮಾಕಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿಮಾರ್ಣವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ವೈರಲ್​

ದೇವಸ್ಥಾನದ ಬಳಿ ನಡೆದ ಘಟನೆಯ ಸಿಸಿ ಕ್ಯಾಮರಾ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಪ್ರಕರಣವು ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ. ಪಿಎಸ್​ಐ ವಿಜಯ್​ ಕುಮಾರ್​ ಮತ್ತು ಕ್ರೈಮ್​ ಸಬ್​ಇನ್​ಸ್ಪೆಕ್ಟರ್​ ಮುತ್ತುರಾಜು ಸಮ್ಮುಖದಲ್ಲಿ ಎರಡೂ ಕೋಮಿನ ಮುಖಂಡರು ಸಭೆ ಕರೆದು ದೇವಸ್ಥಾನದಲ್ಲಿದ್ದ ಬಾಲಕನ ಬಳಿ ಘಟನೆಯ ಮಾಹಿತಿ ಪಡೆದಿದ್ದಾರೆ. ಮಧುಗಿರಿಯಲ್ಲಿ ಹಿಂದು ಮತ್ತು ಮುಸ್ಲಿಮರು ಅನ್ಯೋನ್ಯತೆಯಿಂದ ಇದ್ದಾರೆ. ಲಿಂಗೇನಹಳ್ಳಿಯಲ್ಲಿ ನಡೆದಿರುವ ಘಟನೆ ಸರಿಯಲ್ಲ ಎಂದು ಪೋಲೀಸರು ಬುದ್ಧಿಹೇಳಿದ್ದು, ಇದಕ್ಕೆ ಅನ್ಯಕೋಮಿನ ಮುಖಂಡರೂ ವಿಷಾದ ವ್ಯಕ್ತಪಡಿಸಿದರು ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಗಲಾಟೆ ನಡೆಸುವುದಿಲ್ಲ ಎಂದು ಅನ್ಯಕೋಮಿನ ಮುಖಂಡರು ತಿಳಿಸಿದ್ದು, ಯಥಾ ಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

ಇದೇ ಮೊದಲಲ್ಲ: ಶಾಂತಿಗೆ ಭಂಗ ಉಂಟು ಮಾಡುವುದೇ ಕೆಲವರ ಕೆಲಸವಾಗಿದೆ ಎಂದು ಸಭೆಯಲ್ಲಿ ಹಿಂದು ಮುಖಂಡರು ಅಸಮಾಧಾನ ವ್ಯಕ್ತ ಪಡಿಸಿದ್ದು, ಈ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಪಾರ್ಕ್​ನಲ್ಲಿ ಸ್ಥಾಪನೆ ಮಾಡಲು ಮುಂದಾದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಜತೆಗೆ ಪಾರ್ಕ್​ನಲ್ಲಿರುವ ದೇವಸ್ಥಾನಕ್ಕೆ ಸಂಬಂಧಿಸಿದ ಸಮುದಾಯ ಭವನದಲ್ಲಿ ಅಂಗನವಾಡಿ ತೆರೆಯುವ ಸಂದರ್ಭದಲ್ಲಿ ಸಹ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ದೇವಸ್ಥಾನದ ನಿಮಾರ್ಣದ ಹಿಂದೆ ಒಂದು ಕಥೆಯೇ ಇದ್ದು, ಏಕಕಾಲದಲ್ಲಿ 100 ಕೋತಿಗಳು ಮೃತಪಟ್ಟಾಗ ಅದನ್ನು ಲಿಂಗೇನಹಳ್ಳಿಯಲ್ಲಿ ಸಮಾಧಿ ಮಾಡಿ ಈ ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಿಸಲಾಗಿದೆ. ಮಧುಗಿರಿಯು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಈ ಭಾಗದಲ್ಲಿ ಶಾಂತಿಗೆ ಭಂಗ ಉಂಟು ಮಾಡುತ್ತಿರುವವರ ವಿರುದ್ಧ ಎಚ್ಚರಿಕೆ ವಹಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net