ಭಕ್ತಿಯಿಂದ ವರಮಹಾಲಕ್ಷ್ಮಿ ಪೂಜೆ

31SIRSI2
Published on

ಶಿರಸಿ: ಕುಟುಂಬದ ಪ್ರಗತಿ ಹಾಗೂ ಸಮೃದ್ಧಿಗಾಗಿ ತಾಲೂಕಿನಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪ್ರತಿವರ್ಷ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಆರಾಧನೆ, ಕುಂಕುಮಾರ್ಚನೆ ನೆರವೇರಿಸಿ ವರಮಹಾಲಕ್ಷ್ಮಿ ಪೂಜಿಸುತ್ತಿದ್ದ ಮಹಿಳೆಯರು ಈ ಬಾರಿ ಮನೆಯಲ್ಲೇ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಿದರು.

ಲಕ್ಷ್ಮಿ ಮಾತೆ ಶುದ್ಧತೆಯ ಸಂಕೇತವಾಗಿರುವುದರಿಂದ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ ಬಿಡಿಸಿ, ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು ದಿನದ ಅರ್ಧ ದಿನ ಉಪವಾಸವನ್ನು ಕೈಗೊಂಡು, ಬಳಿಕ ಅಭ್ಯಂಜನ ಮಾಡಿ ಶುಭ್ರ ಬಟ್ಟೆ ಧರಿಸಿ ಮಡಿಯಲ್ಲಿ ನೈವೇದ್ಯ ತಯಾರಿಸಿ ಪೂಜೆ ನೆರವೇರಿಸಿದರು.

12 ಎಳೆಗಳ ಅರಶಿನ ದಾರ, 12 ಎಳೆಗಳ ಗೆಜ್ಜೆವಸ್ತ್ರ ಮತ್ತು ವಿವಿಧ ಹೂವು, ಪತ್ರೆ ಹಾಗೂ ಅಕ್ಷತೆಗಳಿಂದ ಲಕ್ಷ್ಮಿಯನ್ನು ಪೂಜಿಸಲಾಯಿತು. ಅಂಗಪೂಜೆ, ಗ್ರಂಥಿ ಪೂಜೆ, ಕುಸುಮ ಪೂಜೆ, ಪತ್ರ ಪೂಜೆ, ಅಷ್ಟೋತ್ತರ ಶತನಾಮ ಪೂಜೆ ಹಾಗೂ ಪಂಚಾಮೃತಾಭಿಚಷೇಕ ಮಾಡಲಾಯಿತು. ಏಳು ಮಂದಿಗೆ 12 ಭಕ್ಷ್ಯಗಳನ್ನು ದಕ್ಷಿಣೆ- ತಾಂಬೂಲಗಳೊಡನೆ ಬಾಗಿನವಾಗಿ ನೀಡಿ ಅವರ ಆಶೀರ್ವಾದ ಪಡೆಯುವ ಮೂಲಕ ಹಬ್ಬ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net