ಭಕ್ತಿಯಿಂದ ದೇವರ ಮೊರೆ ಹೋದರೆ ನೆಮ್ಮದಿ ಲಭ್ಯ

1001322184
Published on

ಆಲೂರು: ಮನುಷ್ಯನಿಗೆ ಎಷ್ಟೇ ಹಣ, ಐಶ್ವರ್ಯ, ಆಸ್ತಿ, ಅಂತಸ್ತು ಇದ್ದರೂ ನೆಮ್ಮದಿಯೇ ಇರುವುದಿಲ್ಲ. ಆಗ ಅಂತಹವರ ನೆರವಿಗೆ ಬರುವುದೇ ಇಂತಹ ಧಾರ್ಮಿಕ ಕೇಂದ್ರಗಳು. ಎಲ್ಲರೂ ಭಕ್ತಿಯಿಂದ ದೇವರ ಮೊರೆ ಹೋಗುವ ಮೂಲಕ ನೆಮ್ಮದಿ ಕಂಡುಕೊಳ್ಳಬಹುದು ಎಂದು ಶ್ರೀ ಸಂಸ್ಥಾನ ಹಿರೇಮಠ ಕಾರ್ಜುವಳ್ಳಿಯ ಶ್ರೀಸದಾಶಿವ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ತಾಲೂಕಿನ ಚಿಕ್ಕಕಣಗಾಲು ಗ್ರಾಮದಲ್ಲಿ ಶ್ರೀಕಾಳೇಶ್ವರಸ್ವಾಮಿ ಮತ್ತು ಶ್ರೀಮಾಸ್ತಮ್ಮ ದೇವಿಯ ದೇವಾಲಯ ಉದ್ಘಾಟನಾ ಮತ್ತು ಲೋಕಾರ್ಪಣೆಯಲ್ಲಿ ಕಳಸ ಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವಚನ ನೀಡಿದರು. ದೇವಸ್ಥಾನ, ಮಠ, ಮಂದಿರಗಳೇ ನಿಜವಾದ ನೆಮ್ಮದಿಯ ತಾಣಗಳು. ಎಷ್ಟೇ ಜಂಜಾಟವಿದ್ದರೂ ಒಂದಷ್ಟು ಸಮಯ ದೇವಸ್ಥಾನದಲ್ಲಿ ಕುಳಿತು ಬಂದರೆ ನೆಮ್ಮದಿ ಕಂಡುಕೊಳ್ಳಬಹುದು ಎಂದರು.

ಭಕ್ತರು ದೇವಸ್ಥಾನದ ಹುಂಡಿಗೆ ಸಮರ್ಪಿಸಿದ ಕಾಣಿಕೆಯಿಂದ ಬಂದ ಆದಾಯದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಮಾಡಲಾಗಿದೆ. ಗ್ರಾಮಸ್ಥರು ಸಮುದಾಯ ಭವನದ ಸಮಸ್ಯೆ ಕುರಿತು ಮನವಿ ಮಾಡಿದ್ದು, ಸಿಎಂ ವಿಶೇಷ ಅನುದಾನ ತಂದು ಸಮುದಾಯ ಭವನ ಪೂರ್ಣಗೊಳಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಧರ್ಮದ ಆಚರಣೆಯಿಂದಲೇ ಮನುಷ್ಯ ತನ್ನ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎನ್ನುವ ಇತಿಹಾಸವನ್ನು ಕಂಡಿರುವ ನಾವು, ದೇವಾಲಯಗಳ ಜೀರ್ಣೋದ್ಧಾರಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಆಲೂರು ತಾಲೂಕು ಅಧ್ಯಕ್ಷ ಅಜಿತ್ ಚಿಕ್ಕ ಕಣಗಾಲ್ ಮಾತನಾಡಿ, ಸನಾತನ ಸಂಸ್ಕೃತಿ, ಮಠ ಮಾನ್ಯಗಳು ಹಾಗೂ ದೇವಾಲಯಗಳನ್ನು ಉಳಿಸಿ ಬೆಳೆಸಬೇಕಿದೆ. ಸಮಾಜದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಧಾರ್ಮಿಕ ಸಮಾರಂಭಗಳು ಸೂಕ್ತ ವೇದಿಕೆ. ಅವು ನಮ್ಮಲ್ಲಿನ ಆತ್ಮಜ್ಞಾನ ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತವೆ ಎಂದರು.

ನೂತನ ದೇವಾಲಯ ಜೀರ್ಣೋದ್ಧಾರ ಅಂಗವಾಗಿ ದೇವಸ್ಥಾನ ಆವರಣದಲ್ಲಿ ಭಾನುವಾರ ಸಂಜೆ 6 ಗಂಟೆಯಿಂದ ಮಹಾಸಂಕಲ್ಪ ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ, ಮೆಲುನ, ನಾಂದಿ, ಪ್ರತಿಷ್ಠಾಗ ಹೋಮಗಳು, ನವಗ್ರಹ ಹೋಮಗಳು, ವಾಸ್ತು ಹೋಮ, ಗಣಪತಿ ಹೋಮ ಮತ್ತು ಪೂರ್ಣಾಹುತಿ ನೆರವೇರಿದವು. ಸೋಮವಾರ ಬೆಳಗ್ಗೆ 6.10ರಿಂದ 7.10 ಗಂಟೆವರೆಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ನೂತನ ದೇವಾಲಯ ಪ್ರವೇಶ, ಬೆಳಗ್ಗೆ 9.30ಕ್ಕೆ ಯಗಚಿ ಹೊಳೆಯಿಂದ 101 ಕಳಸ ತರುವ ಮೂಲಕ ಕಳಸ ಪ್ರತಿಷ್ಠಾಪನೆ, ಪೂರ್ಣ ಕುಂಭಾಭಿಷೇಕ, ಮಹಾಮಂಗಳಾರತಿ ನೆರವೇರಿದವು. ಎಲ್ಲ ಪೂಜೆಗಳನ್ನು ಪುರೋಹಿತ ಕೌಶಿಕ್ ಬೇಲೂರು ಹಾಗೂ ದೇವಾಲಯದ ಅರ್ಚಕ ಪ್ರದೀಪ್ ನಡೆಸಿಕೊಟ್ಟರು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶಾಸಕ ಸಿಮೆಂಟ್ ಪತ್ನಿ ಪ್ರತಿಮಾ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ಶ್ರೀಕಾಳೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಸರ್ವ ಸದಸ್ಯರು, ಚಿಕ್ಕ ಕಣಗಾಲು, ಜೆ.ತಿಮ್ಮನಹಳ್ಳಿ ಹಾಗೂ ಜನ್ನಾಪುರ ಗ್ರಾಮಸ್ಥರು, ಜಿಲ್ಲೆ, ತಾಲೂಕಿನ ವಿವಿಧ ಗ್ರಾಮಗಳ ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net