

ಕೊಳ್ಳೇಗಾಲ : ಪವಾಡ ಪುರುಷ ಘನನೀಲಿ ಸಿದ್ದಪ್ಪಾಜಿಯ ಭಕ್ತರ ಭಾವನೆಯೊಂದಿಗೆ ಬೆಸೆದುಕೊಂಡಿರುವ ಪಂಕ್ತಿಸೇವೆಯಲ್ಲಿ ಕಂಡಾಯ ಪೂಜೆಯ ಭಕ್ತಿಯ ಹೊನಲು, ಬಾಡೂಟದ ಘಮಲು ಹರಿಯಿತು.
ಕೊಳ್ಳೇಗಾಲ ತಾಲೂಕಿನ ಶ್ರೀಕ್ಷೇತ್ರ ಚಿಕ್ಕಲ್ಲೂರಿನಲ್ಲಿ ಜಾತ್ರೆ ಗುರುವಾರ ಜೀವಕಳೆಯಿಂದ ಕೂಡಿತ್ತು. ನೀತಿ, ನಿಯಮಗಳ ಕಟ್ಟುಪಾಡುಗಳ ಕೊರೆತಗಳ ನಡುವೆಯೂ ಭಾಗವಹಿಸಿದ್ದಷ್ಟೂ ಭಕ್ತರು ಪಂಕ್ತಿಸೇವೆಯಲ್ಲಿ ಪಾಲ್ಗೊಂಡು ಸಂಪ್ರದಾಯವನ್ನು ಮುಂದುವರಿಸಿದರು. ದೇಗುಲದ ದೂರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಡಾರ ಹೂಡಿ ಬಾಡೂಟ ಸವಿಯುತ್ತಿದ್ದವರು ಜಾತ್ರೆಯ ಪರಂಪರೆಯನ್ನು ಅನಾವರಣಗೊಳಿಸಿದರು. ಕುಟುಂಬ ಸಮೇತ ಆಗಮಿಸಿದ್ದ ಭಕ್ತರು ದೇಗುಲದಲ್ಲಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.
ಅಪ್ಪನ ಹೆಗಲ ಮೇಲೆ ಕುಳಿತು ಜಾತ್ರೆ ಕಂಡ ಮಗುವಿನ ಅಚ್ಚರಿ, ಹಗ್ಗದ ಮೇಲೆ ಪಾದ ಇಟ್ಟು ಭಕ್ತರಿಂದ ಕಾಣಿಕೆ ಪಡೆಯಲು ಸರ್ಕಸ್
ಮಾಡುತ್ತಿದ್ದ ಬಾಲಕಿ ಬದುಕಿನ ವೈರುಧ್ಯಗಳ ದರ್ಶನ ಮಾಡಿದರು. ಭಕ್ತರ ಹಣೆಗೆ ಕಪ್ಪು ಧೂಳ್ತ ಇಡುತ್ತಿದ್ದ, ಜಾಗಟೆ, ಬೆತ್ತದೊಂದಿಗೆ ನಡೆದು ಸಾಗುತ್ತಿದ್ದ ನೀಲಗಾರರು ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತಿದ್ದರು. ತಿಂಡಿ-ತಿನಿಸುಗಳ ಅಂಗಡಿಗಳು ತುಂಬಿ ತುಳುಕುತ್ತಿದ್ದವು.
ಧೂಪ, ದೀಪ ಮಾರುತ್ತಿದ್ದವರ ಕೈಗಳಿಗೆ ಬಿಡುವು ಇರಲಿಲ್ಲ. ಬಂದೋಬಸ್ತ್‌ಗಾಗಿ ಬಂದಿದ್ದ ಪೊಲೀಸರು, ಗೃಹರಕ್ಷಕ ಸಿಬ್ಬಂದಿ ಭಕ್ತರ ಸಹಕಾರದೊಂದಿಗೆ ಸುವ್ಯವಸ್ಥೆ ಕಾಪಾಡಿದರು. ಚಿಕ್ಕಲ್ಲೂರಿನ ಸ್ಥಳೀಯರ ಮನೆಗಳು ಜಾತ್ರೆಯ ನಡುವೆ ಕಳೆದುಹೋದಂತೆ ಕಂಡವು. ಮನೆಗಳಿಗೆ ಬಂದಿದ್ದ ಸಂಬಂಧಿಕರಿಗೆ ಆತಿಥ್ಯ ನೀಡಿ ಕಳುಹಿಸುವುದು, ಮನೆ ಮುಂದೆ ಇಟ್ಟು ವ್ಯಾಪಾರ ಮಾಡುವುದರಲ್ಲಿ ಸ್ಥಳೀಯರು ತೊಡಗಿದ್ದರು.
ಬಾಡೂಟದ ಘಮಲು:
ಜಮೀನುಗಳಲ್ಲಿ ಕುಟುಂಬ ಸಮೇತ ಬಿಡಾರ ಹೂಡಿದ್ದವರು ಸಾಮೂಹಿಕವಾಗಿ ಭೋಜನ ಸವಿಯುತ್ತಿದ್ದ ದೃಶ್ಯ ಕಂಡುಬಂತು. ಗುರುವಾರ ಮಧ್ಯಾಹ್ನದ ವೇಳೆಗೆ ಭೋಜನಕೂಟ ತೆರೆದುಕೊಂಡಿತ್ತು. ಬಾಡೂಟದ ಘಮಲು ಪಸರಿಸಿತ್ತು. ಭಕ್ತರ ಪ್ರಸಾದ ಸೇವನೆಗೆ ಜಾಗ ಕೊಟ್ಟ ಜಮೀನು ಮಾಲೀಕರ ಔದಾರ್ಯ ದೊಡ್ಡತನದಿಂದ ಕೂಡಿತ್ತು. ಸಂಬಂಧಿಕರು, ಸ್ನೇಹಿತರೊಂದಿಗೆ ಊಟ ಸವಿದ ಭಕ್ತರು ಸಹಪಂಕ್ತಿ ಭೋಜನದ ಖುಷಿ ಹಂಚಿಕೊಂಡರು. ಚಿಕ್ಕಲ್ಲೂರು ಜಾತ್ರೆಯ ವಿಶೇಷವೇ ಸಹ ಪಂಕ್ತಿ ಭೋಜನ ಸೇವೆ. ಪವಾಡ ಪುರುಷ ಮಂಟೇಸ್ವಾಮಿಯ ಶಿಷ್ಯ ಸಿದ್ದಪ್ಪಾಜಿಯ ಕಂಡಾಯವನ್ನು ಸಹ ಪಂಕ್ತಿ ಭೋಜನ ಮಾಡುವ ಸ್ಥಳದಲ್ಲಿ ಇಟ್ಟು ಪೂಜೆ ಸಲ್ಲಿಸಲಾಯಿತು.
ಸಂಜೆ ವೇಳೆಗೆ ಭಕ್ತರ ಸಂಖ್ಯೆ ಹೆಚ್ಚಾಗತೊಡಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರ ಜಾತ್ರಾ ಸ್ಥಳದಲ್ಲಿ ಕಂಡುಬಂದವು. ಖಾಸಗಿ ಬಸ್‌ಗಳ ಸಂಖ್ಯೆ ಕಡಿಮೆ ಇತ್ತು. ಗೂಡ್ಸ್ ಆಟೋ, ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಜಾತ್ರೆಗೆ ಜನರು ಬಂದಿದ್ದರು. ಚಿಕ್ಕಲ್ಲೂರಿಗೆ ತೆರಳುವ ಮುಖ್ಯ ರಸ್ತೆ ಹದ್ದಗೆಟ್ಟಿದ್ದು, ವಾಹನಗಳ ಸಂಚಾರದಿಂದ ರಸ್ತೆ ತುಂಬ ಧೂಳು ಆವರಿಸಿತ್ತು.
ಸೌಹಾರ್ದಯುತ ಆಚರಣೆಯೇ ಚಿಕ್ಕಲ್ಲೂರಿನ ಪಂಕ್ತಿ ಸೇವೆ. ಭೇದ-ಭಾವವಿಲ್ಲದೆ ಸಹಪಂಕ್ತಿ ಭೋಜನ ನಡೆಸುವುದು ಪದ್ಧತಿ. ಮಂಟೇಸ್ವಾಮಿ ಪರಂಪರೆಯಲ್ಲಿ ಬಲಿ ಪದ್ಧತಿಯಿಲ್ಲ. ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಜಾತ್ಯತೀತ ಪರಿಕಲ್ಪನೆಯಲ್ಲಿರುವ ಈ ಪರಂಪರೆ ಪವಿತ್ರವಾದದ್ದು. ಜನರ ಆಚರಣೆಗೆ ಧಕ್ಕೆಯಾಗಬಾರದು. ಪ್ರತಿವರ್ಷವೂ ಪಂಕ್ತಿ ಸೇವೆ ಮಾಡುತ್ತೇವೆ. ವಿಜಯಕುಮಾರ್, ಸಿದ್ದಪ್ಪಾಜಿ ದೇವರ ಗುಡ್ಡ, ಚನ್ನಪಟ್ಟಣ