ಭಕ್ತಿ ಸಂಪತ್ತಾಗಲು ಅಂತರಂಗ ಶುದ್ಧಿ ಮುಖ್ಯ

Temple
Published on

ಚಿತ್ರದುರ್ಗ: ಭಕ್ತಿ ಸಂಪತ್ತಾಗಲು ಅಂತರಂಗ ಶುದ್ಧವಾಗಿರಬೇಕು ಎಂದು ಆದಿಶಂಕರಚಾರ್ಯ ಲಕ್ಷ್ಮೀನರಸಿಂಹ ಹರಿಹರಪುರದ ಪೀಠಾಧ್ಯಕ್ಷ ಶ್ರೀ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಲಹೆ ನೀಡಿದರು.

ಕರುವಿನಕಟ್ಟೆ ವೃತ್ತದಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇಗುಲದ ಷಢಾದಾರ ಪ್ರತಿಷ್ಠಾಪನೆ, ಭೂಮಿ ಪೂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಲೋಕ ಕಲ್ಯಾಣಾರ್ಥ ಭಗವಂತ ನಾನಾ ಅವತಾರ ತಾಳಿ ಭೂಮಿಗೆ ಬಂದ. ಸಾಕಾರ ಸ್ವರೂಪನಾದ ಆತ ಶುದ್ಧ ಭಕ್ತಿಗೆ ಖಂಡಿತ ಒಲಿಯುತ್ತಾನೆ. ಭಕ್ತಿ, ಯೋಗ, ಜ್ಞಾನ ಮಾರ್ಗದ ಮೂಲಕ ದೇವರನ್ನು ಕಾಣಬಹುದು ಎಂದು ತಿಳಿಸಿದರು.

ದೇಶದ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು. ಅದರ ಚೌಕಟ್ಟಿನೊಳಗೆ ನೆಮ್ಮದಿಯ ಬದುಕು ಕಾಣಬಹುದು. ಪರಸ್ಪರ ಸಹಬಾಳ್ವೆಯಿಂದ ಜೊತೆಗಿರಲು ಸಹಕಾರಿಯಾಗಿದೆ. ಮಾನವ ಕುಲ ಇರುವವರೆಗೂ ಅದರ ಅಗತ್ಯ ತುಂಬಾ ಇದೆ ಎಂದು ಕಿವಿಮಾತು ಹೇಳಿದರು.

ವಿಜ್ಞಾನ ಮುಂದಿಟ್ಟುಕೊಂಡು ತತ್ವಜ್ಞಾನ ಹರಿಯಬೇಕು. ಎಲ್ಲರ ಕಷ್ಟ-ಸುಖಗಳಿಗೆ ಕರ್ಮವೇ ಕಾರಣ. ಅದಕ್ಕಾಗಿ ದೇವರನ್ನು ದೂಷಿಸಬಾರದು ಎಂದರು.

ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ದೇಗುಲ ನಿರ್ಮಿಸುವುದು ಸುಲಭವಲ್ಲ. ಪ್ರಯತ್ನಿಸಿದರೆ ಮಾತ್ರ ಎಲ್ಲವೂ ಸಾಧ್ಯ. ಒಂದು ಕಾಲದಲ್ಲಿ ಚಹ ಮಾರುತ್ತಿದ್ದ ಹುಡುಗ ಈಗ ದೇಶದ ಪ್ರಧಾನಿಯಾಗಿ ರಾಷ್ಟ್ರ ಕಟ್ಟುವ ಕಾರ್ಯ ಮಾಡುತ್ತಿದ್ದು, ಕಠಿಣ ಪರಿಶ್ರಮ, ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಎಂದು ಹೇಳಿದರು.

ದೇಗುಲ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ಮಾತನಾಡಿ, ದೇವರು ಸರ್ವಾಂತರ್‌ಯಾಮಿ. ಎಲ್ಲರೂ ಸನ್ಮಾರ್ಗದ ಹಾದಿಯಲ್ಲಿ ನಡೆಯಬೇಕು. ಅಸತ್ಯದಿಂದ ಸತ್ಯದ ಕಡೆ, ಕತ್ತಲೆಯಿಂದ ಬೆಳಕಿನೆಡೆ ಸಾಗಲು ದೇಗುಲ ಅವಶ್ಯಕ ಎಂದು ಹೇಳಿದರು.

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಡಾ.ಶಾಂತವೀರ ಸ್ವಾಮೀಜಿ, ಶ್ರೀ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀ ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಸದಸ್ಯ ಎನ್.ಚಂದ್ರಶೇಖರ್, ದೇಗುಲದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎನ್.ಓಂಕಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net