

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಶ್ರೀ ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳೆಲ್ಲರಿಗೂ ವ್ಯವಸ್ಥಿತ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಗೆ ಕ್ರಮವಹಿಸಿ. ಸಾರ್ವಜನಿಕರು ಸರದಿ ಸಾಲಿನಲ್ಲಿ ಸಾಗಲು ಯಾವುದೇ ತೊಂದರೆ ಆಗದಂತೆ ಶಾಮಿಯಾನ ಹಾಕಿಸುವುದರ ಜತೆಗೆ ನೀರು, ಮಜ್ಜಿಗೆ ವಿತರಣೆಗೆ ಕೌಂಟರ್ ತೆರೆಯುವಂತೆ ತಿಳಿಸಿದರು.
ದೇವಿ ದರ್ಶನಕ್ಕೆ ಬರುವ ವಿವಿಐಪಿ ಸಂಬಂಧ ಶಿಷ್ಟಾಚಾರ ಪಾಲನೆ ಮಾಡಿ ಎಂದರಲ್ಲದೆ, ಜನಸಂದಣಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸ್ಕೌಟ್ ಮತ್ತು ಗೈಡ್ಸ್, ಗೃಹ ರಕ್ಷಕದಳ ಜತೆಗೆ ಸ್ವಯಂಸೇವಕರನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ಹಾಸನಾಂಬ ಜಾತ್ರಾ ಮಹೋತ್ಸದ ಹಿನ್ನೆಲೆಯಲ್ಲಿ ಸ್ವಾಗತ ಕಾಮಾನು, ಹೂವಿನ ಅಲಂಕಾರ, ದೀಪಾಲಂಕಾರಗಳಿಗೆ ನಿಯಮಾನುಸಾರ ವಾರ್ತಾ ಇಲಾಖೆ ಮೂಲಕ ಟೆಂಡರ್ ಕರೆಯುವಂತೆ ತಿಳಿಸಿದರು. ದೇವಸ್ಥಾನದ ಸಣ್ಣಪುಟ್ಟ ರಿಪೇರಿ ಸಂದರ್ಭದಲ್ಲಿ ಮೂಲ ಸ್ವರೂಪಕ್ಕೆ ದಕ್ಕೆಯಾಗದಂತೆ ನಿಗಾ ವಹಿಸಿ. ಜಾತ್ರಾ ಮಹೊತ್ಸವ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ವತಿಯಿಂದ ಅಗತ್ಯ ಸಿಬ್ಬಂದಿ, ಬ್ಯಾರಿಕೇಡ್ ಮತ್ತಿತರ ವ್ಯವಸ್ಥೆಗೆ ಕ್ರಮ ವಹಿಸಿ ಹಾಗೂ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕುರಿತು ವಿಡಿಯೋ ಮಾಡಿಸಿ ಸಾರ್ವಜನಿಕರ ಮಾಹಿತಿಗಾಗಿ ಎಲ್‌ಇಡಿ ಪರದೆ ಹಾಗೂ ಟಿವಿಗಳಲ್ಲಿ ಪ್ರಸಾರ ಮಾಡುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಮಾತನಾಡಿ ಜಾತ್ರಾ ಮಹೊತ್ಸವಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಜಾತ್ರೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಿದ್ಧಪಡಿಸುತ್ತಿರುವ ರೂಪುರೇಷಗಳ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ. ಆರ್. ಪೂರ್ಣಿಮಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಇ. ಜಗದೀಶ್, ಉಪ ವಿಭಾಗಾಧಿಕಾರಿ ಮಾರುತಿ, ನಗರಸಭೆ ಪೌರಾಯ್ತುಕರಾದ ಸತೀಶ್ ಮತ್ತಿತರರು ಹಾಜರಿದ್ದರು.