

ಚಿಟಗುಪ್ಪ: ಚಾಂಗಲೇರಾದಲ್ಲಿ ಶ್ರೀ ವೀರಭದ್ರೇಶ್ವರ ದೇವರ ರಥೋತ್ಸವ ಅಪಾರ ಭಕ್ತಾದಿಗಳ ಜೈಘೋಷಗಳ ಮಧ್ಯೆ ಬುಧವಾರ ಮಧ್ಯರಾತ್ರಿ ಅದ್ದೂರಿಯಾಗಿ ಜರುಗಿತು. ಮಹಾರಾಷ್ಟ್ರ, ತೆಲಂಗಾಣ, ಅಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧಡೆಯಿಂದ ಆಗಮಿಸಿದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ವೀರಭದ್ರೇಶ್ವರ ದೇವರ ದರ್ಶನ ಪಡೆದು ಕೃತಾರ್ಥರಾದರು.
ವೀರಭದ್ರೇಶ್ವರ ದೇವಸ್ಥಾನದಿಂದ ಬುಧವಾರ ಸಂಜೆ ಆರಂಭವಾದ ಪಲ್ಲಕ್ಕಿ ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯರಾತ್ರಿ ಥೇರ್ ಮೈದಾನಕ್ಕೆ ಬಂದ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು ರಥೋತ್ಸವ ವೈಭವವನ್ನು ಕಣ್ತುಂಬಿಕೊಂಡರು.
ಮುತ್ತಿನ ಪಲ್ಲಕ್ಕಿ, ವೀರಗಾಸೆ, ಪುರುಷ ಹಾಗೂ ವಿಶೇಷವಾಗಿ ಮಹಿಳೆಯರ ಡೊಳ್ಳು ಕುಣಿತ, ಬಾಜಾ ಭಜಂತ್ರಿ ಮತ್ತಿತರ ವಾದ್ಯ ಮೇಳ ಹಾಗೂ ಜೈಘೋಷಗಳ ಸದ್ದು, ಬಾನೆತ್ತರಕ್ಕೆ ಹಾರಿದ ಪಟಾಕಿಗಳ ಬಣ್ಣ ಬಣ್ಣದ ಓಕುಳಿ ರಥೋತ್ಸವಕ್ಕೆ ಕಳೆ ತಂದುಕೊಟ್ಟವು.
ಅಸAಖ್ಯಾತ ಭಕ್ತರಿಂದ ಶ್ರೀ ವೀರಭದ್ರೇಶ್ವರ ಮಹಾರಾಜಕೀ ಜೈ ಎಂಬ ಜೈಘೋಷಗಳು ಮುಗಿಲು ಮುಟ್ಟುವಂತಿದ್ದವು. ಬೆಳಗ್ಗೆಯಿಂದ ರಾತ್ರಿವರೆಗೆ ನಾನಾ ಕಡೆ ಭಕ್ತರಿಗೆ ಹಲವಾರು ದಾನಿಗಳು ದಾಸೋಹ ವ್ಯವಸ್ಥೆ ಮಾಡಿದ್ದರು. ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಅದರಂತೆ ಸ್ವಯಂ ಸೇವಕರು ಸಹ ಶ್ರಮಿಸಿದರು. ಗುರುವಾರ ಬೆಳಗ್ಗೆ ನಾನಾ ಕಡೆಯಿಂದ ಆಗಮಿಸಿದ ಖ್ಯಾತ ಪೈಲ್ವಾನರ ಜಂಗಿ ಕುಸ್ತಿ ನೋಡುಗರ ಮೈ ರೋಮಾಂಚನಗೊಳಿಸಿತು.