ಭಕ್ತರಿಗೆ ದರ್ಶನ ನೀಡಿದ ಬಿಳಿಗಿರಿರಂಗನಾಥಸ್ವಾಮಿ

09 yelandur 01
Published on

ಯಳಂದೂರು: ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲ ಮಂಗಳವಾರ ಬಾಗಿಲು ತೆರೆದಿದೆ. ಮುಜರಾಯಿ ಇಲಾಖೆಯ ದೇಗುಲಗಳೆಲ್ಲವೂ ಬಾಗಿಲು ತೆರೆಯಬೇಕೆಂಬ ಸರ್ಕಾರದ ಆದೇಶ ಇದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರ ಸ್ಪಷ್ಟ ಸೂಚನೆಯ ಮೇರೆಗೆ ದೇಗುಲವನ್ನು ಭಕ್ತರಿಗೆ ಮುಕ್ತಗೊಳಿಸಲಾಗಿದೆ.


ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಗುಲ ಮುಚ್ಚಲಾಗಿತ್ತು. ಜೂ.8ರಿಂದ ದೇಗುಲಗಳನ್ನು ತೆರೆಯುವಂತೆ ಸೂಚನೆ ನೀಡಲಾಗಿತ್ತು. ಆದರೆ ಇಲ್ಲಿನ ಸಿಬ್ಬಂದಿ ಹಾಗೂ ಅರ್ಚಕರು ಕೋವಿಡ್-19ರ ಭಯದಿಂದ ದೇವಸ್ಥಾನವನ್ನು ಇನ್ನಷ್ಟು ದಿನ ತೆರೆಯದಿರುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು. ಆದರೆ ಸರ್ಕಾರದ ಸ್ಪಷ್ಟ ನಿರ್ದೇಶನ ಇರುವುದರಿಂದ ಕೋವಿಡ್ ನಿಯಮಗಳನ್ನು ಪಾಲಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ಭಕ್ತರಿಗೆ ಬಿಳಿಗಿರಿರಂಗನಾಥಸ್ವಾಮಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.


ಮೊದಲ ದಿನ ಸುಮಾರು ನೂರೈವತ್ತಕ್ಕೂ ಹೆಚ್ಚು ಭಕ್ತರು ಆಗಮಿಸಿ, ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಭಕ್ತರ ಅನುಕೂಲಕ್ಕಾಗಿ ಈಗಾಗಲೆ ಮೂರ‌್ನಾಲ್ಕು ಸಾರಿಗೆ ಸಂಸ್ಥೆ ಬಸ್‌ಗಳು ಯಳಂದೂರಿನಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಸಂಚರಿಸುತ್ತಿವೆ. ಇಲ್ಲಿಗೆ ಆಗಮಿಸುವ ಭಕ್ತರು ಮನೆಯಿಂದಲೇ ಊಟದ ವ್ಯವಸ್ಥೆ ಮಾಡಿಕೊಂಡು ಬಂದರೆ ಹೆಚ್ಚು ಅನುಕೂಲ. ಏಕೆಂದರೆ ದಾಸೋಹ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಜತೆಗೆ ಇಲ್ಲಿ ಯಾವ ಹೋಟೆಲ್‌ಗಳು ಇಲ್ಲ.


ಪ್ರಸಾದ ವ್ಯವಸ್ಥೆ ಆರಂಭವಾಗಿಲ್ಲ: ಇಲ್ಲಿರುವ ದಾಸೋಹ ಭವನದಲ್ಲಿ ಈ ಹಿಂದೆ ಪ್ರಸಾದ ವಿನಿಯೋಗ ನಡೆಯುತ್ತಿತ್ತು. ಆದರೆ ಸದ್ಯಕ್ಕೆ ಪ್ರಸಾದ ವಿನಿಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದಾಸೋಹ ಸ್ಥಳ ಕಿರಿದಾಗಿರುವುದರಿಂದ ಹಾಗೂ ಇಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲು ಸಾಧ್ಯವಾಗದೆ ಇರುವುದರಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿಲ್ಲ, ಭಕ್ತರು ದೇವರ ದರ್ಶನ ಪಡೆಯಲು ಮಾತ್ರ ಅವಕಾಶ ನೀಡಲಾಗಿದೆ.

ಬೆಟ್ಟಕ್ಕೆ ದೂರದಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಲ್ಲಿ ಹೋಟೆಲ್ ವ್ಯವಸ್ಥೆ ಇಲ್ಲ. ನಿಗದಿತ ಅವಧಿಯಲ್ಲಿ ಮಾತ್ರ ಬಸ್ ಸೌಲಭ್ಯವಿದೆ. ಈ ಸಮಯದಲ್ಲಿ ಊಟಕ್ಕೆ ತೊಂದರೆಯಾಗುತ್ತದೆ. ಈ ಹಿಂದೆ ದಾಸೋಹ ವ್ಯವಸ್ಥೆ ಇತ್ತು. ಕೋವಿಡ್ ಹಿನ್ನೆಲೆಯಲ್ಲಿ ದಾಸೋಹ ನಿಲ್ಲಿಸಲಾಗಿದೆ. ಅಲ್ಲೇ ಊಟ ಉಣಬಡಿಸುವ ಬದಲು, ಪಾರ್ಸೆಲ್ ರೂಪದಲ್ಲಿ ಭಕ್ತರಿಗೆ ಹಂಚುವ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ.
ಶಾಂತರಾಜು, ಭಕ್ತ

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ದೇಗುಲಕ್ಕೆ ಭಕ್ತರು ಆಗಮಿಸಲು ಅವಕಾಶ ಕಲ್ಪಿಸಲಾಗಿದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ದೇವಸ್ಥಾನದಲ್ಲಿ ತೀರ್ಥಪ್ರಸಾದ ನೀಡುವುದಿಲ್ಲ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸ್ಥಳದ ಸಮಸ್ಯೆಯಿಂದ ಕೋವಿಡ್ ನಿಯಮ ಪಾಲನೆಗೆ ತೊಂದರೆ ಇರುವ ಕಾರಣ ದಾಸೋಹ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು ಮುಂದಿನ ದಿನಗಳಲ್ಲಿ ಇದಕ್ಕೂ ಕ್ರಮ ವಹಿಸಲಾಗುವುದು.
ವೆಂಕಟೇಶ್‌ಪ್ರಸಾದ್, ಇಒ, ಬಿಳಿಗಿರಿರಂಗನಾಥಸ್ವಾಮಿ ದೇಗುಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net