ಭಕ್ತರಿಂದ ಅಗ್ನಿಪ್ರವೇಶ, ನಾಟಕ ಪ್ರದರ್ಶನ

gls 1-1
ಮಸೂತಿ ಗ್ರಾಮದಲ್ಲಿ ಸೋಮವಾರ ವೀರಭದ್ರೇಶ್ವರ ಜಾತ್ರಾ ನಿಮಿತ್ತ ನಡೆದ ಅಗ್ನಿಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾದ ಅಪಾರ ಭಕ್ತರು.
Published on

ಗೊಳಸಂಗಿ: ಮಸೂತಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಮತ್ತು ಗ್ರಾಮದೇವತೆ ಜಾತ್ರೆ ವೈಭವದಿಂದ ನಡೆಯಿತು.

ಸೋಮವಾರ ಬೆಳಗ್ಗೆ ಜಾತ್ರೆ ನಿಮಿತ್ತ ಗುಂಡು ಎತ್ತುವ ಸ್ಪರ್ಧೆ, ಚೀಲ ಎತ್ತುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತ ಸ್ಪರ್ಧಾಳುಗಳಿಗೆ ಬಹುಮಾನ ನೀಡಲಾಯಿತು. ಮಧ್ಯಾಹ್ನ ಪುರವಂತರ ವೀರಗಾಸೆಯೊಂದಿಗೆ ವೀರಭದ್ರೇಶ್ವರ ಪಲ್ಲಕ್ಕಿ ಮೆರವಣಿಗೆ ದೇವಸ್ಥಾನವರೆಗೆ ನಡೆಯಿತು. ಪುರವಂತರು ಹಾಗೂ ಭಕ್ತರು ಶ್ರದ್ಧಾಭಕ್ತಿಯಿಂದ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಅಗ್ನಿಕುಂಡ ಪ್ರವೇಶ ಮಾಡಿದರು. ಜಾತ್ರೆಗೆ ಬಂದ ಸಹಸ್ರಾರು ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸೊಲ್ಲಾಪುರದ ಸಿದ್ರಾಮೇಶ್ವರ ಕಲಾತಂಡದಿಂದ ಸೋಮವಾರ ರಾತ್ರಿ ಪ್ರದರ್ಶನಗೊಂಡ ‘ಸೊಕ್ಕಿನ ಸೊಸೆ’ ಸಾಮಾಜಿಕ ನಾಟಕಕ್ಕೆ ಕೊಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಚಾಲನೆ ನೀಡಿ ಮಾತನಾಡಿ, ನಾಟಕ ನಮ್ಮ ನಿತ್ಯ ಬದುಕಿನ ಕನ್ನಡಿಯಂತೆ. ಇದರಲ್ಲಿನ ಒಳ್ಳೇಯ ಸನ್ನಿವೇಶಗಳು ನಿಮ್ಮ ಬಾಳಿಗೆ ದಾರಿದೀಪವಾಗಲಿ. ಕೆಟ್ಟ ಸನ್ನಿವೇಶಗಳು ಅಗ್ನಿಕುಂಡದಲ್ಲಿ ಸುಟ್ಟು ಹೋಗಲಿ ಎಂದರು.

ತಾಪಂ ಮಾಜಿ ಅಧ್ಯಕ್ಷ ಕಲ್ಲು ಸೊನ್ನದ ಮಾತನಾಡಿ, ರಂಗಕಲೆ ನಮ್ಮ ನಾಡಿನ ಸಾಂಸ್ಕೃತಿಕ ವೈಭವ. ಈ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸೋಣ ಎಂದರು.

ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಕೆ.ವಿ. ಕುಲಕರ್ಣಿ, ಶಂಕ್ರಪ್ಪ ಹಂಗರಗಿ, ಆನಂದ ಬಿಷ್ಟಗೊಂಡ, ಗುರುಲಿಂಗ ಯರಂತೇಲಿ, ರಮೇಶ ಬೀಳಗಿ, ಬಸು ಸಾಲಳ್ಳಿ, ಸಚಿನ್ ಪಾಟೀಲ, ಮೋಹನಗೌಡ ಪಾಟೀಲ, ವಿಶ್ವನಾಥ ಹಿರೇಮಠ, ನಂದಪ್ಪ ಬರಗಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net