

ಕೊಳ್ಳೆಗಾಲ: ಪಟ್ಟಣದ ಕೊಳ್ಳೇಗಾಲ ಮೋಳೆಯಲ್ಲಿ ಪವಾಡ ಪುರುಷ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ ಅಪಾರ ಭಕ್ತರ ಹರ್ಷೋದ್ಘಾರದ ನಡುವೆ ಶುಕ್ರವಾರ ಮುಂಜಾನೆ ವಿಜೃಂಭಣೆಯಿಂದ ನೆರವೇರಿತು.
ಕೊಂಡಕ್ಕೆ ಪೂಜೆ ಸಲ್ಲಿಸಿದ ಶ್ರೀ ಕುರುಬನ ಕಟ್ಟೆ ಮಠದ ಧರ್ಮಾಧಿಕಾರಿ ವರುಣ ಲಿಂಗರಾಜು ಅರಸ್ ಸ್ವಾಮೀಜಿ ಮಾತನಾಡಿ, ಕೊಂಡೋತ್ಸವ ಪವಾಡ ದೇವರು ಮತ್ತು ಮನುಷ್ಯರ ನಡುವೆ ನಂಬಿಕೆ ಹೆಚ್ಚಿಸುತ್ತದೆ. ಧರ್ಮ ಸಂಸ್ಕೃತಿಯನ್ನು ಜೀವಂತವಾಗಿಡುತ್ತದೆ. ಹಬ್ಬ, ಉತ್ಸವಗಳು ಸಮಾಜಗಳ ನಡುವೆ ಬಾಂಧವ್ಯ ಬೆಸೆಯುವ ಸೇತುವೆಗಳಾಗಬೇಕು. ಆಗಿದ್ದಾಗ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬೆಳಗ್ಗೆ ಶ್ರೀ ಕುರುಬನ ಕಟ್ಟೆ ಮಠದಿಂದ ಕಂಡಾಯಗಳನ್ನು ಹೊತ್ತು ತಂದಿದ್ದ ಮಠದ ಸೋಮಣ್ಣ, ಮಹಾಲಿಂಗ, ಜಡೆ ರೇಚಣ್ಣ, ಮರಿಸ್ವಾಮಿ, ನಿಂಗರಾಜು, ಕುಮಾರ, ಪುಟ್ಟನಿಂಗ, ಗಿರಿ ಹಾಗೂ ಮಹಾದೇವ ಉಪ್ಪಾರ ಮೋಳೆ ಬಡಾವಣೆ ಹೊರ ವಲಯದಲ್ಲಿರುವ ಗುರು ಸಿದ್ದಮ್ಮನವರ ಮಠದಲ್ಲಿ ಕಂಡಾಯಗಳನ್ನು ಶುಚಿಗೊಳಿಸಿ ಹೂವು ಹೊಂಬಾಳೆಯಿಂದ ಅಲಂಕಾರ ಮಾಡಿದ ನಂತರ ಕೊಂಡದ ಮಾಳಕ್ಕೆ ಮೆರವಣಿಗೆ ಮೂಲಕ ತರಲಾಯಿತು.
ಕೊಂಡ ವೀಕ್ಷಣೆಗಾಗಿ ಸೇರಿದ ಸಹಸ್ರಾರು ಜನರ ನಡುವೆ ದೇವರ ಗುಡ್ಡರು ಕೊಂಡ ಹಾಯ್ದರು. ಈ ವೇಳೆ ಭಕ್ತರ ಹಷೋದ್ಘಾರ ಮೊಳಗಿತು. ನಂತರ ಗ್ರಾಮದ ಬೀದಿಗಳಲ್ಲಿ ಕಂಡಾಯಗಳ ಮೆರವಣಿಗೆ ನೆರವೇರಿಸಲಾಯಿತು. ಪ್ರತಿ ಮನೆಯಲ್ಲೂ ಕಂಡಾಯಗಳಿಗೆ ಹೂವು ಹಣ್ಣು-ಕಾಯಿಗಳೊಡನೆ ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.
ಗ್ರಾಮದ ಯಜಮಾನರಾದ ಪರಮೇಶ್, ಶಿವಣ್ಣ, ಪ್ರಭುಸ್ವಾಮಿ, ಮಹದೇವು, ಚಂದ್ರು, ಕೃಷ್ಣ, ಗೋವಿಂದ, ಮಹದೇವಶೆಟ್ಟಿ, ನಗರಸಭೆ ಸದಸ್ಯ ಧರಣೇಶ್, ನಾಮ ನಿರ್ದೇಶನ ಸದಸ್ಯ ನಟರಾಜು, ಮುಖಂಡ ಬಸವರಾಜು, ನಂಜುಂಡ, ಹಾಗೂ ವಿವಿಧ ಗ್ರಾಮಗಳ ಯಜಮಾನರು, ಮುಖಂಡರು ಇದ್ದರು.