ಭಕ್ತರ ಪ್ರಸಿದ್ಧ ಯಾತ್ರಾಸ್ಥಳ ಶಿವಗಂಗೆ, ಭಕ್ತರ ಸೆಳೆವ ದಕ್ಷಿಣ ಕಾಶಿ, ಜಿಲ್ಲೆಯ ಪವಿತ್ರ ಸ್ಥಳ

Shivagange_From_Foot_Hills
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ದಕ್ಷಿಣ ಕಾಶಿಯೆಂದೇ ಪ್ರಸಿದ್ಧವಾದ ಶಿವಗಂಗೆ ಭಕ್ತರ ಪಾಲಿಗೆ ಪವಿತ್ರ ಯಾತ್ರಾ ಸ್ಥಳವಾಗಿ ಗುರುತಿಸಿಕೊಂಡಿದೆ.

ನೆಲಮಂಗಲ ತಾಲೂಕು ದಾಬಸ್‌ಪೇಟೆ ಹೋಬಳಿಯ ಶಿವಗಂಗೆಗೆ ನೆರೆಹೊರೆ ಜಿಲ್ಲೆ, ನೆರೆರಾಜ್ಯದ ಭಕ್ತರೂ ಆಗಮಿಸುತ್ತಾರೆ. ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಶಿಖರವಾಗಿರುವುದರಿಂದ ವಾರಾಂತ್ಯ ದಿನಗಳ ಮುಂಜಾವಿನಲ್ಲಿ ಚಾರಣಿಗರ ದಂಡೇ ನೆರೆದಿರುತ್ತದೆ. ಹತ್ತು ಹಲವು ವೈಶಿಷ್ಟ್ಯಗಳ ಮೂಲಕ ಗಮನ ಸೆಳೆಯುವ ಈ ಶಿವಗಂಗೆ ರಾಜ್ಯದ ಪ್ರಮುಖ ದೇಗುಲಗಳಲ್ಲಿ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ರಾಜಧಾನಿಗೆ ಸನಿಹ: ರಾಜ್ಯ ರಾಜಧಾನಿ ಬೆಂಗಳೂರಿನಿಂದ 58 ಕಿ.ಮೀ ದೂರವಿದ್ದು, ಬೆಂಗಳೂರು-ತುಮಕೂರು ಮಾರ್ಗವಾಗಿ ನೆಲಮಂಗಲದ ಮೂಲಕ ಡಾಬಸ್‌ಪೇಟೆ ತಲುಪಿ ಅಲ್ಲಿಂದ 8 ಕಿಮೀ ಸಾಗಿದರೆ ಶಿವಗಂಗೆ ಸಿಗುತ್ತದೆ. ತುಮಕೂರಿನಿಂದ 25 ಕಿಮೀ ಅಂತರದಲ್ಲಿದ್ದು, ಕುಮುದ್ವತಿ ನದಿ ಉಗಮವೂ ಇದೇ ಬೆಟ್ಟದಲ್ಲಿ ಎಂಬುದು ಇದರ ಹಿರಿಮೆಯ ಗರಿಮೆಗಳಲ್ಲೊಂದಾಗಿದೆ.

ಪ್ರಮುಖ ಆಕರ್ಷಣೆಗಳು: ಗಂಗಾಧರೇಶ್ವರನ ಲಿಂಗದ ಮೇಲೆ ತುಪ್ಪ ಸವರಿದರೆ ಬೆಣ್ಣೆಯಾಗಿ ಪರಿವರ್ತನೆಯಾಗುವ ಅಚ್ಚರಿ ಜಗತ್‌ಪ್ರಸಿದ್ಧವಾಗಿದೆ. ವೀರಭದ್ರೇಶ್ವರ, ಹೊನ್ನಾದೇವಿ, ಗಂಗಾಂಧರೇಶ್ವರ, ಬಸವ (ನಂದಿ), ಪಾತಾಳಗಂಗೆ, ಒಳಕಲ್ಲು ತೀರ್ಥ, ಒಳಕಲ್ಲು ತೀರ್ಥಕ್ಕೆ ಹೋಗುವ ಗುಹೆ, ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾದ ಶಿಲ್ಪಕಲೆ, ಆದಿಶಂಕರಾಚಾರ್ಯರ ಮೂರ್ತಿ, ಕೆಂಪೇಗೌಡರ ಸುರಂಗ ಮಾರ್ಗ, ಬೆಳ್ಳಿ ಗಂಟೆ ಬಂಡೆ, ನೂರೆಂಟು ಶಿವಲಿಂಗಗಳು, ವಿವಿಧ ಮಠಗಳು, ಶಾಂತಲಾ ಡ್ರಾಪ್ ಇಲ್ಲಿನ ಪ್ರಮುಖ ಆಕರ್ಷಣೆಗಳೆನಿಸಿವೆ.

ವಿಶೇಷತೆ: ಸಮುದ್ರ ಮಟ್ಟದಿಂದ 4 ,547 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಂಗಳೂರಿನಿಂದ ಪಶ್ಚಿಮ ದಿಕ್ಕಿನ ಕಡೆಯಿದೆ, ತುಮಕೂರಿನಿಂದ ಪೂರ್ವ ದಿಕ್ಕಿಗೆ ಇದ್ದು, ನೋಡಲು ಶಂಖಾಕೃತಿಯ ಬೆಟ್ಟವಾಗಿ ಗೋಚರಿಸುತ್ತದೆ. ಪೂರ್ವದಿಂದ ಬಸವ, ಪಶ್ಚಿಮದಿಂದ ಗಣೇಶ, ಉತ್ತರದಿಂದ ಶಿವಲಿಂಗ, ದಕ್ಷಿಣದಿಂದ ಸರ್ಪದ ಆಕಾರದಲ್ಲಿ ಕಾಣುವುದು ಇದರ ವಿಶೇಷತೆಯಾಗಿದೆ.

ಪ್ರಮುಖ ಜಾತ್ರೆ: ಮಕರ ಸಂಕ್ರಾಂತಿಯ ದಿನದಂದೆ ಪ್ರತಿ ವರ್ಷ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಜಾತ್ರೆಗೂ ಪುರಾತನ ಐತಿಹ್ಯವಿದೆ, ಇದನ್ನು ಶಿವಗಂಗೆ ಜಾತ್ರೆ ಅಥವಾ ಗಂಗಾಧರೇಶ್ವರನ ಜಾತ್ರೆ ಎಂದೂ ಕರೆಯಲಾಗುತ್ತದೆ.

ಅದೃಷ್ಟ ಪರೀಕ್ಷಿಸುವ ಒಳಕಲ್ಲು ತೀರ್ಥ: ಶಿವಗಂಗೆಯೆಂದರೆ ಒಳಕಲ್ಲು ತೀರ್ಥಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ. ನೂರಾರು ಭಕ್ತರು ಒಳಕಲ್ಲು ತೀರ್ಥದಲ್ಲಿ ಅದೃಷ್ಟ ಪರೀಕ್ಷೆ (ಇಷ್ಟಾರ್ಥ ಸಿದ್ದಿ ಲೆಕ್ಕಾಚಾರ) ನಡೆಸಲು ಮುಗಿಬೀಳುತ್ತಾರೆ. ಇಷ್ಟಾರ್ಥಸಿದ್ದಿಯನ್ನು ಮನದಲ್ಲಿ ನೆನೆದು ಒಳಕಲ್ಲಿನ ಮಾದರಿಯಲ್ಲಿರುವ ಬಂಡೆಯ ಗುಂಡಿಯೊಳಗೆ ಕೈಹಾಕಿ ಅದೃಷ್ಟ ಪರೀಕ್ಷಿಸುವರು ವಾಡಿಕೆ. ಕೈಹಾಕಿದ ಎಲ್ಲರಿಗೂ ನೀರು ಸಿಗುವುದಿಲ್ಲ ಎಂಬುದು ವಿಶೇಷ. ನೀರು ಸಿಕ್ಕಿದರೆ ಬೇಡಿದ ಕಾರ್ಯ ಈಡೇರಲಿದೆ, ಸಿಗದಿದ್ದರೆ ಇಲ್ಲ ಎಂಬುದು ನಂಬಿಕೆಯಾಗಿದೆ.

ನವದುರ್ಗೆಯರ ಆರಾಧನಾ ಉತ್ಸವ: ಹೊನ್ನಾದೇವಿಯನ್ನು ಪಟ್ಟಕ್ಕೆ ಕೂರಿಸುವ ಮೂಲಕ ನವರಾತ್ರಿ ವೈಭವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುತ್ತದೆ. 7 ದಿನ ನವದುರ್ಗೆಯರಿಗೆ ವಿಶೇಷ ಪೂಜೆ ಪುನಸ್ಕಾರ ನೆರವೇರಲಿದೆ. ಹಾಗೆಯೇ ಕಾರ್ತಿಕ ಕಡೇ ಸೋಮವಾರವೂ ವಿಶೇಷ ಪೂಜೆ ಏರ್ಪಡಿಸಲಾಗುವುದು.

ಗಿರಿಜಾ ಕಲ್ಯಾಣ: ಪ್ರತಿವರ್ಷ ನಡೆಯುವ ಗಿರಿಜಾಕಲ್ಯಾಣೋತ್ಸವದ ಅದ್ದೂರಿತನಕ್ಕೆ ಸಾಕ್ಷಿಯಾಗುತ್ತದೆ, ಪ್ರತಿ ವರ್ಷ ಜ.14ರಂದು ಸಂಜೆ 5.50ಕ್ಕೆ ಗಂಗೋತ್ಪತ್ತಿ ಜಾಗದಲ್ಲಿ ಪೂಜೆ ನಡೆಯಲಿದೆ, ಬಳಿಕ ರಾತ್ರಿ 7 ಗಂಟೆ ವೇಳೆಗೆ ಗಿರಿಜಾ ಕಲ್ಯಾಣೋತ್ಸವ ಆರಂಭವಾಗಲಿದೆ. ಸಂಕ್ರಾಂತಿ ಹಿಂದಿನ ದಿನದ ಗಂಗೋತ್ಪತ್ತಿ ಪವಾಡ ಹಾಗೂ ಗಿರಿಜಾ ಕಲ್ಯಾಣೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಶಾಂತಲಾ ಡ್ರಾಪ್: ಸುಮಾರು 10ನೇ ಶತಮಾನದಲ್ಲಿ ಶಿವಗಂಗೆ ಚೋಳರ ಕಾಲದ ಆಳ್ವಿಕೆಯಲ್ಲಿತ್ತು ಎನ್ನಲಾಗಿದ್ದರೂ ಇಲ್ಲಿ ಅವರ ಶಾಸನಗಳ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ. ಆದರೆ 12ನೇ ಶತಮಾನದಲ್ಲಿ ಹೊಯ್ಸಳರ ಆಳ್ವಿಕೆಯಲ್ಲಿ ರಾಜ ವಿಷ್ಣುವರ್ಧನ ಇಲ್ಲಿಗೆ ಹಲವು ಬಾರಿ ಭೇಟಿ ನೀಡಿದ್ದಾನೆ ಎಂಬುದನ್ನು ಇತಿಹಾಸ ತಿಳಿಸುತ್ತದೆ. ಪಟ್ಟದರಸಿ ಶಾಂತಲೆ ಬೆಟ್ಟದ ಮೇಲಿಂದ ಕೆಳಕ್ಕೆ ಬಿದ್ದು ದೇಹತ್ಯಾಗ ಮಾಡಿದರು ಎನ್ನಲಾಗಿದ್ದು, ಈ ಸ್ಥಳವನ್ನು ಈಗ ಶಾಂತಲಾ ಡ್ರಾಪ್ ಎಂದು ಕರೆಯಲಾಗುತ್ತಿದೆ.

ಉತ್ತರ ಭಾರತದ ಕಾಶಿಯಂತೆಯೇ ಪುಣ್ಯಕ್ಷೇತ್ರವೆನಿಸಿದ್ದು, ಶಿವಂಗೆಯನ್ನು ದಕ್ಷಿಣ ಕಾಶಿಯಂತಲೇ ಭಕ್ತರು ಪರಿಭಾವಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ನೆರೆ ಜಿಲ್ಲೆ ಹೊರರಾಜ್ಯದ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಶ್ಯಾಮಪ್ರಸಾದ್ ದೀಕ್ಷಿತ್ , ದೇಗುಲದ ಪ್ರಧಾನ ಅರ್ಚಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net