

ಹುಮನಾಬಾದ್: ಹಳ್ಳಿಖೇಡ(ಬಿ)ದ ಶ್ರೀ ಸೀಮಿನಾಗನಾಥ ದೇವಸ್ಥಾನ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಬೆಳೆಗ್ಗೆಯಿಂದಲೇ ನಾನಾ ಕಡೆಯಿಂದ ದೇವರ ದರ್ಶನಕ್ಕಾಗಿ ಭಕ್ತ ಸಾಗರ ಹರಿದು ಬಂದಿದ್ದು, ಭಾನುವಾರ ನಸುಕಿನ ಜಾವ ಅಪಾರ ಭಕ್ತಾಧಿಗಳ ಮಧ್ಯೆ ಸಡಗರ ಸಂಭ್ರಮದಿಂದ ರಥೋತ್ಸವ ಜರುಗಿತು.
ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ದೇವಸ್ಥಾನದವರೆಗೆ ನಡೆದ ಪಲ್ಲಕ್ಕಿ ಉತ್ಸವವನ್ನು ಪ್ರಮುಖರು, ವ್ಯಾಪಾರಸ್ಥರು, ಭಕ್ತರು, ಮೆರವಣಿಗೆ ಮೂಲಕ ನಡೆಸಿದರು. ಪುರವಂತರ ಕಲೆ, ಭಜನೆ, ಶಾಲಾ ಮಕ್ಕಳ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷವಾಗಿದ್ದವು. ಸಂಜೆ ದೀಪಾರ್ಚನೆ ಪಾದಪೂಜೆ ಜರುಗಿತು. ದರ್ಶನ ಪಡೆಯಲು ಬೆಳಗ್ಗೆಯಿಂದ ಆರಂಭಗೊಂಡ ಭಕ್ತರ ಸಾಲು ರಾತ್ರಿವರೆಗೂ ಮುಂದುವರೆದಿತ್ತು. ಭಕ್ತರನ್ನು ಸಾಲಿನಲ್ಲಿ ನಿಲ್ಲಿಸಲು ದೇವಸ್ಥಾನ ಸಮಿತಿಯ ಸೇವಕರು ಹಾಗೂ ಪೊಲೀಸರು ಶ್ರಮಿಸಿದರು. ದೇವರ ವಾರ ಶನಿವಾರವಾಗಿರುವುದರಿಂದ ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು.
ಸಂಭ್ರಮದ ರಥೋತ್ಸವ: ಮಹಾರಾಷ್ಟ್ರ, ತೆಲಂಗಾಣ ಸೇರಿ ರಾಜ್ಯದ ವಿವಿಧಡೆಯಿಂದ ಆಗಮಿಸಿದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಕೃತಾರ್ಥರಾದರು. ಶ್ರೀ ಸೀಮಿನಾಗನಾಥ ದೇವಸ್ಥಾನದಿಂದ ಶನಿವಾರ ಸಂಜೆ ಆರಂಭವಾದ ಪಲ್ಲಕ್ಕಿ ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮಧ್ಯೆ ರಾತ್ರಿ ನಂತರ ಥೇರ್ ಮೈದಾನಕ್ಕೆ ಬಂದ ಮೆರವಣಿಗೆ ಚಳಿಯನ್ನೂ ಲೆಕ್ಕಿಸದೆ ಭಕ್ತರು ವೀಕ್ಷಿಸಿದರು.
ಮುತ್ತಿನ ಪಲ್ಲಕ್ಕಿ, ಡೊಳ್ಳು ಕುಣಿತ, ಬಾಜಾ ಭಜಂತ್ರಿ ಮತ್ತಿತರೆ ವಾದ್ಯ ಮೇಳ ಹಾಗೂ ಜೈಘೋಷಗಳ ಸದ್ದು, ಬಾನೆತ್ತರಕ್ಕೆ ಹಾರಿದ ಪಟಾಕಿಗಳ ಬಣ್ಣ ಬಣ್ಣದ ಓಕುಲಿ ಮಧ್ಯೆ ರಥೋತ್ಸವ ಜರುಗಿತು. ಅಸಂಖ್ಯಾತ ಭಕ್ತರಿಂದ ಸೀಮಿನಾಗನಾಥ ಮಹಾರಾಜಕೀ ಜೈ ಎಂಬ ಜೈಘೋಷಗಳು ಮುಗುಲು ಮುಟ್ಟುವಂತ್ತಿದ್ದವು. ಸ್ಥಳೀಯ ಚಿಕ್ಕಮಠದ ಶ್ರೀಪತಿ ಪಂಡಿರಾಧ್ಯ ಶಿವಾಚಾರ್ಯರು ಸಾನ್ನಿಧ್ಯದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಪಲ್ಲಕ್ಕಿ ಹಾಗೂ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಎಸಿ ಮಕೂಲ್ ಜೈನ ಪಾಲ್ಗೊಂಡು ದರ್ಶನ ಪಡೆದರು.
ಜಂಗಿ ಕುಸ್ತಿ ಸ್ಪರ್ಧೆ: ಜಾತ್ರೋತ್ಸವದಲ್ಲಿ ನಡೆಯುವ ಜಂಗಿ ಕುಸ್ತಿಗಳು ಜಿಲ್ಲೆಯಲ್ಲಿಯೇ ಅತ್ಯಂತ ಖ್ಯಾತಿ ಪಡೆದಿದ್ದು, ಈ ಜಾತ್ರೆಯ ವಿಶೇಷತೆಯಾಗಿದೆ. ಭಾನುವಾರ ಬೆಳಗ್ಗೆ ನಡೆದ ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ರಾಜ್ಯ ಸೇರಿ ಅಕ್ಕಪಕ್ಕದ ರಾಜ್ಯಗಳ ಪೈಲ್ವಾನರು ಪಾಲ್ಗೊಂಡಿದ್ದು, ಸಂಜೆವರೆಗೂ ನಡೆದ ಜಂಗಿ ಕುಸ್ತಿ ವೀಕ್ಷಿಸಿದ ಆಸಕ್ತರಿಗೆ ರೋಮಾಂಚನಗೊಳಿಸಿತು.