ಭಕ್ತರ ಕಾಣಿಕೆ ಹುಂಡಿಗೆ ಬೀಗ ಮುದ್ರೆ

SRP_29-03jpg
ಶ್ರೀರಂಗಪಟ್ಟಣ ತಾಲೂಕಿನ ಹುರುಳಿಕ್ಯಾತನಹಳ್ಳಿ ಗ್ರಾಮದ ಶಂಭುಲಿಂಗೇಶ್ವರಸ್ವಾಮಿ ಹಾಗೂ ಬಂಧುಕಾರಲಿಂಗೇಶ್ವರಸ್ವಾಮಿ ದೇವಾಲಯದ ಹುಂಡಿಗೆ ಬೀಗ ಜಡಿದು ಮುದ್ರೆ ಹಾಕಲಾಯಿತು.
Published on

ಶ್ರೀರಂಗಪಟ್ಟಣ: ತಾಲೂಕಿನ ಹುರುಳಿಕ್ಯಾತನಹಳ್ಳಿ ಗ್ರಾಮದ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ಬಂಧುಕಾರಲಿಂಗೇಶ್ವರ ಸ್ವಾಮಿ ದೇವಾಲಯದ ಭಕ್ತರ ಕಾಣಿಕೆ ಹುಂಡಿಗೆ ಕೊನೆಗೂ ತಾಲೂಕು ಆಡಳಿತ ಬೀಗ ಜಡಿದು ಮುದ್ರೆ ಹಾಕಿ ಭದ್ರಗೊಳಿಸಿದೆ.

ಗ್ರಾಮದ ದೇವಾಲಯಕ್ಕೆ ಮಂಗಳವಾರ ಸಂಜೆ ತೆರಳಿದ್ದ ಕಸಬಾ ಹೋಬಳಿ ರಾಜಶ್ವ ನೀರಿಕ್ಷಕ ಜಯಕುಮಾರ್ ಹಾಗೂ ಗ್ರಾಮಲೆಕ್ಕಿಗ ಕುಬೇರ ಅಂಬಳೆ ಅವರು, ಅರ್ಚಕರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಕಾಣಿಕೆ ಹುಂಡಿಗೆ ಬೀಗ ಜಡಿದು ಮುದ್ರೆ ಒತ್ತಿ ತಾಲೂಕು ಆಡಳಿತದ ಸುಪರ್ದಿಗೆ ಪಡೆದುಕೊಂಡರು. ಪ್ರಸ್ತುತ ದೇಗುಲದ ದೇವರ ಕಾಣಿಕೆ ಹುಂಡಿಯಲ್ಲಿ ಇನ್ನು ಸಹ ಹಣ ಹಾಗೂ ಒಡವೆಗಳಿರುವ ಸಾಧ್ಯತೆಯಿದ್ದು, ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ಇನ್ನು ಮುಂದೆ ಕಾಣಿಕೆ ಹುಂಡಿ ತೆರವು ಅಥವಾ ದೇವಾಲಯದ ಜೀರ್ಣೋದ್ಧಾರ ಪ್ರಕ್ರಿಯೆ ಹಾಗೂ ಹಬ್ಬ ಹರಿದಿನಗಳ ಆಚರಣೆ ಸಂದರ್ಭ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ. ದೇವಾಲಯ ಪ್ರವೇಶ ಹಾಗೂ ದೇವರ ಆಚರಣೆ ವಿಷಯದಲ್ಲಿ ಜಾತಿ-ಭೇದ ತೋರುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ದೇವಾಲಯದ ಭಕ್ತರ ಕಾಣಿಕೆ ಹುಂಡಿಯಲ್ಲಿ ದೊರೆತ ಹಣ ಯಾರ‌್ಯಾರ ಬ್ಯಾಂಕ್ ಖಾತೆಗಳಲ್ಲಿ ಎಷ್ಟು ಜಮಾ ಆಗಿದೆ ಎಂಬುದರ ಕುರಿತು ತಕ್ಷಣವೇ ಮಾಹಿತಿ ನೀಡುವಂತೆ ರಾಜಸ್ವ ನೀರಿಕ್ಷಕರಿಗೆ ಸೂಚಿಸಲಾಗಿದೆ. ಅದನ್ನು ಮುಟ್ಟುಗೋಲು ಹಾಕಿಕೊಂಡು ಮುಜರಾಯಿ ಖಾತೆಗೆ ಪಡೆಯುವ ಪ್ರಕ್ರಿಯೆಗೆ ಬುಧವಾರದಿಂದಲೇ ಕ್ರಮವಹಿಸಲಾಗುವುದು ಎಂದು ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ತಿಳಿಸಿದ್ದಾರೆ.

ದೇವಾಲಯದಲ್ಲಿ ಯಾವಾಗ ಹುಂಡಿ ಇರಿಸಲಾಗಿತ್ತು ಎಂಬ ಮಾಹಿತಿ ಇರದ ಕಾರಣ ಅದನ್ನು ಪರಿಶೀಲಿಸಲಾಗುತ್ತಿದೆ. ಸದ್ಯಕ್ಕೆ ಹುಂಡಿಯನ್ನು ತಾಲೂಕು ಆಡಳಿತದ ಸುರ್ಪದಿಗೆ ಪಡೆಯಲಾಗಿದ್ದು, ಅರ್ಚಕರಿಗೆ ನೋಟಿಸ್ ನೀಡಲಾಗುವುದು. ದೇವಾಲಯದ ಹುಂಡಿ ಎಣಿಕೆ ಸೇರಿದಂತೆ ಎಲ್ಲ ಜವಾಬ್ದಾರಿಯನ್ನು ಸರ್ಕಾರವೇ ನಿರ್ವಹಣೆ ಮಾಡುತ್ತದೆ. ಅಕ್ರಮ ಎಸಗುವವರ ವಿರುದ್ಧ ಕೈಗೊಳ್ಳುವ ಕಠಿಣ ಕ್ರಮದ ಬಗ್ಗೆ ಈಗಾಗಲೇ ಗ್ರಾಮದ ಯಜಮಾನರು ಸೇರಿದಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ.
ಶ್ವೇತಾ ಎನ್.ರವೀಂದ್ರ, ತಹಸೀಲ್ದಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net