

ಸೊರಬ: ಲಿಂಗಪೂಜೆ ಹಾಗೂ ಆಧ್ಯಾತ್ಮಿಕದಲ್ಲಿ ಅಪಾರ ಜ್ಞಾನ ಸಂಪಾದನೆ ಮಾಡಿದ್ದವರು ಗೊಗ್ಗೇಹಳ್ಳಿ ಮಠದ ನಿಜಗುಣ ಶಿವಯೋಗಿಗಳು ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಗೊಗ್ಗೇಹಳ್ಳಿ ಪಂಚಮಠ ಸಂಸ್ಥಾನದ ಲಿಂಗೈಕ್ಯ ಶ್ರೀ ನಿಜಗುಣ ಶಿವಯೋಗಿಗಳ 19ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ತನ್ನನ್ನು ತಾನು ಮಠಗಳಿಗೆ ಸ್ಥಾಯಿ ಅಥವಾ ಪಟ್ಟಭದ್ರನಾಗಿ ಅಂಟಿಕೊಂಡರೆ ಮಠಗಳಿಗೆ ಅಪಾಯ ಎದುರಾಗಲಿದೆ ಎನ್ನುವ ಕಲ್ಪನೆ ಅವರಲ್ಲಿತ್ತು. ನಿಜಗುಣ ಶಿವಯೋಗಿಗಳು ಸಾಮಾಜಿಕ ಕಾಳಜಿ ಹೊಂದಿದ್ದರು ಎಂದು ತಿಳಿಸಿದರು.
ಬದುಕನ್ನು ಖುಷಿಯಾಗಿ ಕಳೆಯಬೇಕಾದರೆ ವಾಸ್ತವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ನಿರ್ಲಿಪ್ತ ಭಾವನೆ ಹೊಂದಿದ್ದ ನಿಜಗುಣ ಶಿವಯೋಗಿಗಳು ಸದಾ ಭಕ್ತರ ಮಾನಸಿಕ ಏಳಿಗೆ ಬಯಸಿದ್ದರು. ಹಾಗಾಗಿ ಮಠಗಳಿಗೆ ಭಕ್ತರು ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದರು ಎಂದರು.
ಕ್ಯಾಸನೂರು ಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ಮಹಾತ್ಮರನ್ನು ನೆನೆಯುವುದೇ ಪುಣ್ಯದ ಕೆಲಸ. ನಿಜಗುಣ ಶಿವಯೋಗಿಗಳು ತಮ್ಮಲ್ಲಿನ ಅಂತಃಕರಣದ ಆಶೀರ್ವಾದವನ್ನು ಭಕ್ತರಿಗೆ ಸದಾಕಾಲ ದಯಪಾಲಿಸುತ್ತಿದ್ದ ಪರಿಣಾಮ ಭಕ್ತರ ಹೃದಯ ಸಿಂಹಾಸನದಲ್ಲಿ ಶ್ವಾಶತವಾಗಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು.
ಭಕ್ತರಿಗೆ ಸಂಸ್ಕಾರ, ಆಚಾರ, ವಿಚಾರಗಳನ್ನು ಬಿತ್ತಿದ್ದರು. ಮಾತೃ ಹೃದಯ ಅವರಲ್ಲಿತ್ತು. ಅನಾರೋಗ್ಯದ ಪರಿಸ್ಥಿತಿಯಲ್ಲೂ ಭಕ್ತರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ಇಂತಹ ಮಹಾತ್ಮರ ಸ್ಮರಣೆ ಪುಣ್ಯದ ಕೆಲಸ. ಅವರ ಸತ್ಕಾರ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಅಸಾಧ್ಯವಾದ ಸಾಧನೆಗೆ ಪ್ರೇರಣೆ ಆಗಲಿದೆ ಎಂದು ತಿಳಿಸಿದರು.
ಬಳಸಗೋಡು ಮಠದ ಶ್ರೀ ನೀಲಕಂಠ ಸ್ವಾಮೀಜಿ ಮಾತನಾಡಿ, ಕಷ್ಟಕ್ಕೆ ಬೀಳದೆ ಪುಣ್ಯ ಲಭಿಸಬೇಕು ಎಂದು ಬಯಸುವ ಮನುಷ್ಯ ಪಾಪದ ಕೆಲಸವನ್ನು ಸುಲಭವಾಗಿ ಮಾಡುತ್ತಾನೆ ಎಂದರು. ಗುರುಬಸವ ಶ್ರೀ, ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ಜಯಮಾಲಾ, ನಾಗರಾಜ್ ಗುತ್ತಿ, ರೇಣುಕಮ್ಮ ಗೌಳಿ, ಮಲ್ಲಿಕಾರ್ಜುನ ನಿಜಗುಣ, ಗುರು, ಪ್ರತೀಕ್, ಷಣ್ಮುಖಗೌಡ ಹರಳಗಿ, ಪ್ರಮೋದ್, ಬಸವರಾಜ್, ಸುನಿಲ್ ಕುಬಲೂರು ಇದ್ದರು.
ಯೋಗ ಗಳಿಸಲು ಗುರುವಿನ ಸ್ಮರಣೆ ಅಗತ್ಯ. ಪ್ರತಿಯೊಂದು ಮನೆಯಲ್ಲಿ ಮಠದ ಪರಿಸರವಿದೆ. ಎಲ್ಲ ಕೊಠಡಿಗಳಂತೆ ದೇವರ ಕೋಣೆಯನ್ನು ನೋಡುವುದಿಲ್ಲ. ಸಮಾಜವನ್ನು ಕಟ್ಟುವುದು ಮಠಗಳ ಕೆಲಸ.
ಶ್ರೀ ಸಂಗಮೇಶ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಗೊಗ್ಗೆಹಳ್ಳಿ ಮಠ