ಭಕ್ತನಪಾಳ್ಯ ಮುಖ್ಯರಸ್ತೆ ಅಭಿವೃದ್ಧಿಗೆ ಚಾಲನೆ, ತಹಸೀಲ್ದಾರ್ ಕೆ. ಮಂಜುನಾಥ್ ನೇತೃತ್ವದಲ್ಲಿ ಸ್ಥಳಕ್ಕೆ ಅಧಿಕಾರಿಗಳ ಭೇಟಿ

22 Nela Ph 01 thasidar Visit
Published on

ನೆಲಮಂಗಲ: ನಗರದ ಭಕ್ತನಪಾಳ್ಯದ ಮುಖ್ಯರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತಿದೆ. ವಿಜಯವಾಣಿಯಲ್ಲಿ ಜು.20ರಂದು ಮಳೆಗೆ ಕೆಸರುಗದ್ದೆಯಂತಾದ ರಸ್ತೆಗಳು ಎಂಬ ಶೀರ್ಷಿಕೆಯಡಿ ಭಕ್ತನಪಾಳ್ಯ ಮುಖ್ಯರಸ್ತೆಯಲ್ಲಿ ಗುಂಡಿ, ಹೊಂಡಗಳು ನಿರ್ಮಾಣವಾಗಿ ವಾಹನಸವಾರರು ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸುವ ಸ್ಥಿತಿ ಇರುವ ಬಗ್ಗೆ ವರದಿ ಪ್ರಕಟವಾಗಿತ್ತು.

ಈ ವರದಿಯನ್ನು ಕಂಡು ಎಚ್ಚೆತ್ತ ತಹಸೀಲ್ದಾರ್ ಕೆ. ಮಂಜುನಾಥ್ ಅವರು ಅಧಿಕಾರಿಗಳ ಜತೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. 3 ಕಿ.ಮೀ.ಯ ಈ ರಸ್ತೆಯ ಪರಿಸ್ಥಿತಿ ಕಂಡು ಮರುಗಿದ ತಹಸೀಲ್ದಾರ್ ಅವರು ತಕ್ಷಣವೇ ರಸ್ತೆಯ ದುರಸ್ತಿಗೆ ಸೂಚನೆ ನೀಡಿ, ಕಾಮಗಾರಿಗೆ ಚಾಲನೆ ನೀಡಿದರು.

ಕಾಂಕ್ರೀಟ್ ರಸ್ತೆ: ಭಕ್ತನಪಾಳ್ಯ ಮುಖ್ಯರಸ್ತೆ ಜಿಪಂ ರಸ್ತೆಯಾಗಿದೆ. ಇದನ್ನು ಶೀಘ್ರದಲ್ಲೇ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಲಾಗುವುದು ಎಂದು ತಹಸೀಲ್ದಾರ್ ಕೆ. ಮಂಜುನಾಥ್ ಭರವಸೆ ನೀಡಿದರು. ಸದ್ಯದ ರಸ್ತೆಯ ಪರಿಸ್ಥಿತಿಯನ್ನು ಗಮನಿಸಿ, ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭೆಯ ವಿಶೇಷ ಯೋಜನೆಯಡಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನಿತ್ಯ ಸಹಸ್ರಾರು ವಾಹನಗಳು ಸಂಚರಿಸಿದರೂ ಈ ರಸ್ತೆಯನ್ನು ಏಳೆಂಟು ವರ್ಷಗಳಿಂದ ಅಭಿವೃದ್ಧಿಪಡಿಸಿರಲಿಲ್ಲ. ಇದರಿಂದಾಗಿ ಅದು ಸಂಪೂರ್ಣ ಹದಗೆಟ್ಟು ಹೋಗಿತ್ತು. ಇದೀಗ ತಹಸೀಲ್ದಾರ್ ಕೆ. ಮಂಜುನಾಥ್ ಈ ರಸ್ತೆಯ ಅಭಿವೃದ್ಧಿಗೆ ಮುಂದಾಗಿದ್ದಾಗಿದ್ದಾರೆ. ಇದಕ್ಕಾಗಿ ಸಹಕರಿಸಿದ ವಿಜಯವಾಣಿ ಕಾರ್ಯ ಶ್ಲಾಘನೀಯ. ಪೂರ್ಣಿಮಾ ಸುಗ್ಗರಾಜು, ನಗರಸಭೆ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net