

ಚಿತ್ರದುರ್ಗ: ಮುರಿಗೆಯ ಶಾಂತವೀರ ಗುರು-ವಿರಕ್ತ ಪರಂಪರೆಯಾಚೆ ಭಕ್ತವರ್ಗ ಪರಂಪರೆಯನ್ನು ಕಟ್ಟ ಬಯಸುವ ಮೂಲಕ ಶ್ರೇಷ್ಠತೆ ಮೆರೆದಿದ್ದರು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸದ ಅಂಗವಾಗಿ ಶುಕ್ರವಾರ ಶ್ರೀ ಮಠದ ಮುರಿಗೆ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಲೀಲಾವಿಶ್ರಾಂತಿ ತಾ ಣದ ಆವರಣದಲ್ಲಿ ಏರ್ಪಡಿಸಿದ್ದ ವಚನಾಭಿಷೇಕ ಹಾಗೂ ಮುರುಘಾ ಪರಂಪರೆಯಲ್ಲಿ ಸಾಗಿಬಂದ ಗುರುಪರಂಪರೆಯ ಸ್ವಾಮೀಜಿಗಳ ಜೀವನ ದರ್ಶನ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಲಾವಣಿ, ತಾರಾವಳಿ, ಜನಪದ ಹಾಡುಗಳಲ್ಲಿ, ಶಾಂತವೀರ ಶ್ರೀಗಳ ಹಾಗೂ ರಾಜಾಬಿಚ್ಚುಗತ್ತಿ ಭರಮಣ್ಣ ನಾಯಕರ ಚಾರಿತ್ರಿಕ ಘಟನೆಗಳು ದಾಖಲಾಗಿವೆ. ನಮ್ಮಲ್ಲಿನ್ನೂ ಗುರು-ವಿರಕ್ತರೆನ್ನುವ ದ್ವಂದ್ವದ ತಾಕಲಾಟಗಳಿವೆ. ಬುದ್ಧ, ಡಾ.ಬಿ.ಆರ್.ಅಂಬೇಡ್ಕರ್ ಅವರೊಟ್ಟಿಗೆ ಬಸವಣ್ಣನವರನ್ನು ನೋಡಬಹುದಾಗಿದೆ. ಪುಣ್ಯ ಪುರುಷರನ್ನು ಸ್ಮರಿಸುವ ಕಾರ್ಯ ಮಾಡಬೇಕಿದೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ, ಮುರುಘಾಪೀಠದ ಸ್ಥಾಪನೆಗೆ ಐತಿಹಾಸಿಕ ಮಹತ್ವವಿದೆ. ಪ್ರಕಾಂಡ ಪಂಡಿತರು, ಪೌರಾಣಾಗಮ ವೇದಶಾಸ್ತ್ರ ನಿಪುಣರು, ಕಾವ್ಯಪ್ರವೀಣರಾಗಿದ್ದ ಶಾಂತವೀರರು ಕರ್ನಾಟಕದ ವೀರಶೈವ-ಲಿಂಗಾಯತ ಧರ್ಮದ ಪುನರುತ್ಥಾನಕ್ಕೆ ಕಾರಣ ಪುರುಷರಾಗಿದ್ದಾರೆ ಎಂದರು.
ವೀರಶೈವ ಸಮಾಜದ ನಿರ್ದೇಶಕ ಪ್ರಕಾಶ್ ದಂಪತಿ, ಮುರುಘೇಂದ್ರ ಸ್ವಾಮೀಜಿ ಮತ್ತಿತರರು ಇದ್ದರು. ಜಮುರಾ ಕಲಾವಿದ ಉಮೇಶ್‌ಸಂಗಪ್ಪ ಪತ್ತಾರ್ ಪ್ರಾರ್ಥಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜಕಟ್ಟಿ ಸ್ವಾಗತಿಸಿದರು. ಮಹಾಂತೇಶ್ ನಿಟ್ಟುವಳ್ಳಿ ನಿರೂಪಿಸಿದರು.
ಕಾರ‌್ಯಕ್ರಮ
ಶ್ರೀಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಲೀಲಾವಿಶ್ರಾಂತಿ ಆವರಣದಲ್ಲಿ ಜು.26ರಂದು ಬೆಳಗ್ಗೆ 8ಕ್ಕೆ ಶ್ರೀ ಗುರುಸಿದ್ಧ ಸ್ವಾಮೀಜಿ(ಇಮ್ಮಡಿ ಮುರಿಗೆ ಸ್ವಾಮೀಜಿ)ಕುರಿತಂತೆ ವಿಷಯಾವಲೋಕನ ಏರ್ಪಡಿಸಲಾಗಿದೆ. ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ. ಭರತ್ ಉಪನ್ಯಾಸ ನೀಡಲಿದ್ದಾರೆ.
ಜಯಂತ್ಯುತ್ಸವ
ಶ್ರೀ ಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಅವರ ಲೀಲಾ ವಿಶ್ರಾಂತಿ ತಾಣದ ಆವರಣದಲ್ಲಿ ಜು.28 ರಂದು ಶಿವಶರಣ ಶಂಕರದಾಸಿಮಯ್ಯ ಹಾಗೂ 29ರಂದು ಶಿವಶರಣೆ ಅಕ್ಕನಾಗಮ್ಮನವರ ಜಯಂತ್ಯುತ್ಸವವನ್ನು ಬೆಳಗ್ಗೆ 8.30ಕ್ಕೆ ಹಮ್ಮಿಕೊಳ್ಳಲಾಗಿದೆ. ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಅಧ್ಯಕ್ಷತೆ ವಗಹಿಸುವರು. ಸದಸ್ಯರಾದ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ಸದಸ್ಯರಾದ ಪಿ.ಎಸ್. ಶಂಕರ್, ಸಿ.ಎನ್. ಚಂದ್ರಶೇಖರ್ ಉಪಸ್ಥಿತರಿರುವರು.
---