

ಮೈಸೂರು: ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು, ಪ್ರತಿ ಕ್ವಿಂಟಾಲ್ಗೆ ಎಂಎಸ್‌ಪಿ 2320ರ ಜತೆಗೆ 500 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.
ಭತ್ತ ಖರೀದಿ ಕೇಂದ್ರಗಳನ್ನು ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಪ್ರಾರಂಭಿಸಬೇಕು. ರಾಜ್ಯದ 20 ಜಿಲ್ಲೆಗಳಲ್ಲಿ ಸುಮಾರು 30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಸೂಕ್ತವಾದಂತಹ ಖರೀದಿ ಕೇಂದ್ರ ಹಾಗೂ ಏಜೆನ್ಸಿಗಳನ್ನು ಗುರುತಿಸಬೇಕು. ಹೊಸಪೇಟೆ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಭತ್ತ ಕಟಾವು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ರೈತರಿಗೆ ಯಾವುದೇ ಶರತ್ತುಗಳನ್ನು ವಿಧಿಸದೆ ಕೇರಳ, ತೆಲಂಗಾಣ ಮತ್ತು ಒಡಿಸ್ಸಾ ರಾಜ್ಯದಲ್ಲಿ ಇರುವ ರೀತಿ 500 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.
ಪಂಜಾಬಿನಲ್ಲಿ ಖರೀದಿ ಕೇಂದ್ರಗಳನ್ನು ನವಂಬರ್ ಒಂದರಿಂದಲೇ ಆರಂಭ ಮಾಡಲಾಗಿದ್ದು, ಯಾವುದೇ ಶರತ್ತುಗಳಿಲ್ಲದೆ ಸುಮಾರು 85.41 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿ ಮಾಡಲಾಗಿದೆ. ಇದರ ಮೌಲ್ಯ 19,800 ಕೋಟಿ ರೂ. ಎಂದು ಅಲ್ಲಿನ ಆಹಾರ ಇಲಾಖೆ ತಿಳಿಸುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಭತ್ತ ಖರೀದಿ ಮಾಡುವ ಏಜೆನ್ಸಿಗಳನ್ನು ನೇಮಕ ಮಾಡಿ, ರೈತರ ನೋಂದಣಿ ಮಾಡಿಕೊಳ್ಳಲು ಹಾಗೂ ಭತ್ತ ಬೆಳೆದಿರುವ ಎಲ್ಲ ರೈತರ ಪಹಣಿಯನ್ನು ಪಡೆದು ಅವರ ಖಾತೆಗೆ ಹಣ ಜಮಾ ಮಾಡುವಂತಹ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯದಲ್ಲಿ ಮೇಕೆದಾಟು ಯೋಜನೆ ರಾಜಕೀಯಕ್ಕೆ ಬಲಿಯಾಗಿದ್ದು, ನಮ್ಮ ರೈತರ ಹಿತಾಶಕ್ತಿ ಕಾಪಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗುತ್ತಿವೆ. ಯೋಜನೆಗೆ ಇರುವ ಅಡೆತಡೆಗಳನ್ನು ಸರಿಪಡಿಸಿ, ಪರಿಸರ ಇಲಾಖೆಯಿಂದ ಇರುವ ಕಾನೂನು ಸಮಸ್ಯೆಯನ್ನು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬೇಕು. ರಾಜ್ಯದಲ್ಲಿ ವಕ್ಫ್ ಬೋರ್ಡ್ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣ ಕೈ ಬಿಟ್ಟು, ರೈತನಿಗೆ ಯಾವುದೇ ಕಾನೂನಿನಡಿ ತೊಂದರೆಯಾಗದ ರೀತಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರೈತರನ್ನು ಒಗ್ಗೂಡಿಸಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ರೈತ ಸಂಘದ ಮುಖಂಡರಾದ ನಾರಾಯಣ ರೆಡ್ಡಿ, ರಾಮನಗರ ಸಂಪತ್ತು ಶಿವಕುಮಾರ್, ರಾಜೇಶ್ ಮಾತನಾಡಿದರು. ಹಾಸನ ವಿನೋದ್ ಕುಮಾರ್, ಮಲಿಯೂರು ಹರ್ಷ, ವಿಠಲ, ಗಣಾಚಾರಿ, ಹತ್ತಳ್ಳಿ ಸ್ವಾಮೀರಾಜ್, ಹಾಲಿನ ನಾಗರಾಜ್, ಹನುಮಯ್ಯ, ಹಾಡ್ಯರವಿ, ಪ್ರಕಾಶ್ ಗಾಂಧಿ, ಚಿಕ್ಕಬಳ್ಳಾಪುರ ಗೋವಿಂದರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಜೇಶ್ ಮುದ್ದಳ್ಳಿ, ಚಿಕ್ಕಸ್ವಾಮಿ, ದೇವೇಂದ್ರಕುಮಾರ್, ಶಿವರುದ್ರಪ್ಪ ಕಸುವಿನಹಳ್ಳಿ, ಮಂಜೇಶ್, ಶಾಂತರಾಜ್, ಬನ್ನೂರು ಕೃಷ್ಣಪ್ಪ, ಬಿದರಳ್ಳಿ ಮಾದಪ್ಪ, ಸತೀಶ್ ಗುರುನಪುರ, ಮೋಹನ ಚಂದ್ರು, ದೇವಿರಮ್ಮನಳ್ಳಿ ಮಹೇಶ್ ಇತರರು ಇದ್ದರು.