ಬ್ಲೂ ಬಾಯ್ಸ ಯೂತ್ ಕ್ಲಬ್‌ಗೆ ಮುನ್ನಡೆ

16 sunti01
Published on

ಸುಂಟಿಕೊಪ್ಪ: ಸ್ಥಳೀಯ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ 26ನೇ ವರ್ಷದ ಡಿ.ಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ ಮೊದಲ ದಿನವಾದ ಶುಕ್ರವಾರ ಅತಿಥೇಯ ಬ್ಲೂ ಬಾಯ್ಸ ಯೂತ್ ಕ್ಲಬ್ ಮತ್ತು ಪನ್ಯ ಎಫ್.ಸಿ. ಪನ್ಯ ತಂಡದ ಉದ್ಘಾಟನಾ ಪಂದ್ಯವನ್ನು ಡಿ.ಶಿವಪ್ಪ ಅವರ ಮೊಮ್ಮಗ ವಿಶಾಲ್ ಶಿವಪ್ಪ ಚೆಂಡನ್ನು ಒದೆಯುವ ಮೂಲಕ 10 ದಿನಗಳ ಪಂದ್ಯಾವಳಿಗೆ ವಿಧ್ಯುಕ್ತ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ಶಬ್ಬಿರ್, ರಫೀಕ್ ಖಾನ್, ವಸಂತಿ, ಮಾಜಿ ಅಧ್ಯಕ್ಷ ಕೆ.ಇ.ಕರೀಂ ಹಾಗೂ ಬ್ಲೂಬಾಯ್ಸ ಯೂತ್ ಕ್ಲಬ್ ಆಲಿಕುಟ್ಟಿ, ಗೌರವಧ್ಯಕ್ಷ ಟಿ.ವಿ.ಪ್ರಸನ್ನ, ಬಿ.ಕೆ.ಪ್ರಶಾಂತ್, ಕುಶಾಲನಗರ ಉದ್ಯಮಿ ಬ್ಲೆಸ್ಜಿಕ್ರಾಸ್ತ, ಎಂ.ಎ.ಉಸ್ಮಾನ್ ಸೇರಿದಂತೆ ಮತ್ತಿತರರು ಇದ್ದರು.

ಮೊದಲ ಉದ್ಘಾಟನಾ ಪಂದ್ಯವು ಸುಂಟಿಕೊಪ್ಪ ಬ್ಲೂ ಬಾಯ್ಸ ಮತ್ತು ಪನ್ಯ ಎಫ್.ಸಿ. ಪನ್ಯ ತಂಡದ ನಡುವೆ ನಡೆದು ಪಂದ್ಯದ ಮೊದಲಾರ್ಧದ 12 ಮತ್ತು 18ನೇ ನಿಮಿಷದಲ್ಲಿ ಬ್ಲೂಬಾಯ್ಸ ತಂಡದ ಮುನ್ನಡೆ ಆಟಗಾರ ಚಂದ್ರ ಅವರು 2 ಗೋಲು ಹೊಡೆಯುವುದರ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ದ್ವಿತೀಯಾರ್ಧದಲ್ಲಿ ಚೇತರಿಕೆಯ ಆಟವಾಡಿದ ಪನ್ಯ ಎಫ್.ಸಿ. ಪನ್ಯ ತಂಡದವರು 2 ಗೋಲು ಗಳಿಸುವ ಮೂಲಕ ಪಂದ್ಯ ಸಮಗೊಳಿಸಿದರು. ಟ್ರೈಬ್ರೇಕರ್‌ನಲ್ಲಿ ಪನ್ಯ ಎಫ್.ಸಿ ಪನ್ಯ ತಂಡವನ್ನು 5-3 ಗೋಲುಗಳಿಂದ ಸೋಲಿಸಿ ಅತಿಥೇಯ ಬ್ಲೂ ಬಾಯ್ಸ ತಂಡದವರು ಮುನ್ನಡೆ ಪಡೆದುಕೊಂಡರು.

ದ್ವಿತೀಯ ಪಂದ್ಯಾವಳಿಯು ಅಮಿಟಿ ಎಫ್.ಸಿ. ಗದ್ದೆಹಳ್ಳ ಮತ್ತು ಬೆಟ್ಟಗೇರಿ ಎಫ್.ಸಿ. ತಂಡಗಳ ನಡುವೆ ನೆಡೆದು ಎರಡು ತಂಡಗಳು ಸಮಬಲದ ಪ್ರದರ್ಶನವನ್ನು ನೀಡಿದವು. ಯಾವುದೇ ಗೋಲುಗಳಿಸಿದ್ದ ಹಿನ್ನಲೆಯಲ್ಲಿ ಟ್ರೈಬ್ರೇಕರ್‌ನಲ್ಲಿ 4-5 ಗೋಲುಗಳಿಂದ ಅಮಿಟಿ ಎಫ್.ಸಿ ಗದ್ದೆಹಳ್ಳ ತಂಡವು ಮುಂದಿನ ಸುತ್ತಿಗೆ ಆರ್ಹತೆ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net