ಫಂಗಸ್‌ಗೆ ಜಿಲ್ಲೆಯ ಇಬ್ಬರು ಬಲಿ - ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮುನ್ಯಾಳ

Black Fungus
Published on

ಬೆಳಗಾವಿ: ಕರೊನಾ ಸೋಂಕಿತರ ಸಂಖ್ಯೆ ಇಳಿಮುಖ ಆಗುತ್ತಿದೆ ಎಂಬ ಸಂತಸ ನಡುವೆಯೇ ಜಿಲ್ಲೆಯಲ್ಲಿ ಈಗಾಗಲೇ 9 ಜನರಲ್ಲಿ ಬ್ಲ್ಯಾಕ್ ಫಂಗಸ್ ಹಾಗೂ ಇಬ್ಬರಲ್ಲಿ ವೈಟ್ ಫಂಗಸ್ ದೃಢಪಟ್ಟಿದ್ದು, ಆ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಅವರ ಸಾವಿಗೆ ಬ್ಲಾೃಕ್ ಫಂಗಸ್ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಮುನ್ಯಾಳ ತಿಳಿಸಿದ್ದಾರೆ.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 9 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿವೆ. ಆ ಪೈಕಿ ಗೋಕಾಕ ಮತ್ತು ಅಥಣಿ ತಾಲೂಕಿನ ತಲಾ 70 ವರ್ಷ ಮೇಲ್ಪಟ್ಟ ವೃದ್ಧರು ಫಂಗಸ್‌ನಿಂದಲೇ ಮೃತಪಟ್ಟಿರುವ ಶಂಕೆ ಇದೆ. ಬ್ಲ್ಯಾಕ್ ಫಂಗಸ್‌ಗೆ ಸಮೀಪದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದರು.

ಮಧುಮೇಹಿಗಳಲ್ಲೇ ಹೆಚ್ಚು: ಸಕ್ಕರೆ ಕಾಯಿಲೆ ಇದ್ದವರಲ್ಲಿಯೇ ಹೆಚ್ಚಾಗಿ ಬ್ಲ್ಯಾಕ್ ಫಂಗಸ್ ಕಂಡು ಬರುತ್ತಿದೆ. ಕೋವಿಡ್ ಚಿಕಿತ್ಸೆಯ ಅಡ್ಡಪರಿಣಾಮವಾಗಿ ಇದು ಉಲ್ಬಣಿಸುತ್ತಿರುವ ಸಾಧ್ಯತೆ ಇದೆ. ಆಕ್ಸಿಜನ್ ಪಡೆಯುತ್ತಿರುವಾಗ ಶುದ್ಧ ನೀರು ಬಳಸದೇ ಇದ್ದರೆ, ಒಂದೇ ಮಾಸ್ಕ್‌ಅನ್ನು ದಿನನಿತ್ಯ ತೊಳೆಯದೇ
ಹಾಕಿಕೊಂಡ ಸಂದರ್ಭದಲ್ಲಿ ಬ್ಲ್ಯಾಕ್ ಫಂಗಸ್ ಆಕ್ರಮಿಸಬಹುದು. ಅದಕ್ಕಾಗಿ ಸಾರ್ವಜನಿಕರು ದಿನನಿತ್ಯವೂ ಸ್ವಚ್ಛ ಮತ್ತು ಸುರಕ್ಷಿತವಾದ ಮಾಸ್ಕ್ ಹಾಕಿಕೊಳ್ಳಬೇಕು.

ಮಧುಮೇಹದಿಂದ ಬಳಲುತ್ತಿರುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮುನ್ಯಾಳ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net