

ವಿಜಯಪುರ: ಬ್ಲಾೃಕ್ ಮನಿ ವೈಟ್ ಮಾಡಿ ಕೊಟ್ಟರೆ ಅದರ ಮೂರು-ನಾಲ್ಕು ಪಟ್ಟು ಹೆಚ್ಚು ಹಣ ಕೊಡುವುದಾಗಿ ನಂಬಿಸಿ ರೈತನಿಂದ ಬರೋಬ್ಬರಿ 20 ಲಕ್ಷ ರೂ.ವಂಚನೆಗೈದ ಪ್ರಕರಣವೊಂದು ಬೆಳಕಿಗೆ ಬಂದಿದೆ !
ಬಬಲೇಶ್ವರದ ಬಸಪ್ಪಯ್ಯ ವೃತ್ತದ ಬಳಿಯ ನಿವಾಸಿ ಚಂದ್ರಶೇಖರ ಬಸಪ್ಪ ಕನ್ನೂರ ಮೋಸಕ್ಕೆ ಬಲಿಯಾಗಿದ್ದು, 20 ಲಕ್ಷ ಕಳೆದುಕೊಂಡಿದ್ದಾರೆ. ನೊಂದ ಚಂದ್ರಶೇಖರ ಇದೀಗ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂಗನಕೇರಿಯ ಲಕ್ಷ್ಮಿ ರಾಮಪ್ಪ ಕಂಕನವಾಡಿ, ಹೊಳದೂರು ಗ್ರಾಮದ ಈರಣ್ಣ ರುದ್ರಪ್ಪ ಕೌಜಲಗಿ, ಹಲಗಾ ಗ್ರಾಮದ ಅಪ್ಪಾಸಾಹೇಬ ಬಾಬು ಇಂಚಲ್ ಹಾಗೂ ಚಿಕ್ಕೋಡಿಯ ಸುನೀಲ ಕಾಶಿನಾಥ ದೊಡ್ಡಮನಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿರುವ ನಾಲ್ವರು ಆರೋಪಿಗಳು ಚಂದ್ರಶೇಖರನನ್ನು ಸಂಪರ್ಕಿಸಿ ತಮ್ಮ ಬಳಿ ಬ್ಲ್ಯಾಕ್ ಮನಿ ಇದ್ದು, ವೈಟ್ ಮಾಡಿಕೊಟ್ಟರೆ ಅದರ ಮೂರು-ನಾಲ್ಕು ಪಟ್ಟು ಹಣ ಕೊಡುವುದಾಗಿ ಫೋನ್ ಮೂಲಕ ಒತ್ತಾಯಿಸಿದ್ದಾರೆ. ಪದೇ ಪದೆ ಫೋನ್ ಮಾಡಿ ನಂಬಿಕೆ ಬರುವ ಹಾಗೆ ಮಾಡಿದ್ದಾರೆ. ಆರಂಭದಲ್ಲಿ 5000 ರೂಪಾಯಿ ತಂದು ಕೊಟ್ಟು ಹಣ ಚಲಾವಣೆ ಮಾಡಿಸಿ ಮತ್ತಷ್ಟು ನಂಬಿಕೆ ಬರುವಂತೆ ಮಾಡಿದ್ದಾರೆ. 2023 ಆ. 3 ರಂದು ನಾಲ್ವರು ಆರೋಪಿಗಳು ಕಾರಿನಲ್ಲಿ ಬಂದು ವಿಜಯಪುರದ ಅತಾಲಟ್ಟಿ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮದ ಹತ್ತಿರ ಚಂದ್ರಶೇಖರನಿಂದ 20 ಲಕ್ಷ ರೂಪಾಯಿ ತೆಗೆದುಕೊಂಡು ಖಾಲಿ ಪೇಪರ್ ಹಾಗೂ ನೋಟ್ಬುಕ್ ಹಾಕಿ ಪ್ಯಾಕ್ ಮಾಡಿದ ಒಂದು ರಟ್ಟಿನ ಬಾಕ್ಸ್ ತೋರಿಸಿದ್ದಾರೆ. ಅದರಲ್ಲಿ ಒಂದು ಕೋಟಿ ರೂಪಾಯಿ ಬ್ಲ್ಯಾಕ್ ಮನಿ ಇದೆ ಎಂದು ನಂಬಿಸಿದ್ದಾರೆ. ಆ ರಟ್ಟಿನ ಬಾಕ್ಸ್ ಚಂದ್ರಶೇಖರನಿಗೆ ಕೊಟ್ಟು ಆತನಿಂದ 20 ಲಕ್ಷ ರೂಪಾಯಿ ತೆಗೆದುಕೊಂಡು ಮೋಸ ಮಾಡಿದ್ದಾರೆ.
ಮೋಸಕ್ಕೆ ಒಳಗಾದ ಚಂದ್ರಶೇಖರ ಇದೀಗ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಸ್‌ಪಿ ಎಚ್.ಡಿ. ಆನಂದಕುಮಾರ ಅವರು ಎಎಸ್‌ಪಿ ಶಂಕರ ಮಾರಿಹಾಳ, ಡಿಸಿಆರ್‌ಬಿ ಡಿವೈಎಸ್‌ಪಿ ಅಯ್ಯನಗೌಡ ಪಾಟೀಲ ಮಾರ್ಗದರ್ಶನದೊಂದಿಗೆ ಸೈಬರ್ ಕ್ರೈಮ್‌ನ ಚಾಣಾಕ್ಷ ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ಕಿರಾತಕರ ಜನ್ಮ ಜಾಲಾಡಲು ತಂಡ ಕಟ್ಟಿದ್ದಾರೆ. ಈಗಾಗಲೇ ಕಾರ್ಯಾಚರಣೆ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟುವ ಭರವಸೆ ಪೊಲೀಸ್ ಇಲಾಖೆಯಿಂದ ವ್ಯಕ್ತವಾಗಿದೆ. ಆದರೆ, ಇಂಥ ಮೋಸದ ದಂಧೆಗೆ ಸಾರ್ವಜನಿಕರು ಬಲಿಯಾಗಬಾರದು. ಯಾವುದೇ ಹಣಕಾಸಿನ ವ್ಯವಹಾರ ಇದ್ದರೂ ಬ್ಯಾಂಕ್ ಮೂಲಕವೇ ಮಾಡಿಕೊಳ್ಳಬೇಕೆಂಬುದು ಎಸ್‌ಪಿ ಎಚ್.ಡಿ. ಆನಂದಕುಮಾರ ಅವರ ಸಲಹೆ.
ಇತ್ತೀಚೆಗೆ ವಂಚನೆ ಹಾಗೂ ಮೋಸದ ಪ್ರಕರಣಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಕಾರಣಕ್ಕೆ ಹೆಚ್ಚಿನ ಹಣದಾಸೆಗೆ ವಾಮ ಮಾರ್ಗ ಅನುಸರಿಸಬಾರದು. ಯಾವುದೇ ವ್ಯವಹಾರವನ್ನು ಅಧಿಕೃತವಾಗಿ ಮಾಡಿಕೊಳ್ಳಬೇಕು. ಚಂದ್ರಶೇಖರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತಂಡ ರಚಿಸಲಾಗಿದ್ದು, ವಂಚಕರ ಪತ್ತೆಗೆ ಜಾಲ ಬೀಸಿದ್ದೇವೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು. ಎಚ್.ಡಿ.ಆನಂದಕುಮಾರ, ಎಸ್‌ಪಿ