ಬ್ಲಾಕ್ ಕಾಂಗ್ರೆಸ್‌ನಿಂದ ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ

27 yelandur 06
Published on

ಯಳಂದೂರು: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಯಳಂದೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಟ್ಟಣ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಎರಡು ನಿಮಿಷ ಮೌನಚರಣೆ ಮಾಡಲಾಯಿತು.

ಪಟ್ಟಣ ಪಂಚಾಯಿತಿ ಸದಸ್ಯ ವೈ.ಜಿ.ರಂಗನಾಥ್ ಮಾತನಾಡಿ, ಮನಮೋಹನ್ ಸಿಂಗ್ ನಿಧನದಿಂದ ಭಾರತ ದೇಶವು ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞ ಹಾಗೂ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಿದೆ. ಭಾರತದ ಹದಿನಾಲ್ಕನೇ ಪ್ರಧಾನಮಂತ್ರಿಯಾಗಿದ್ದ ಡಾ.ಮನಮೋಹನ್ ಸಿಂಗ್ ಭಾರತದ ಆರ್ಥಿಕ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡಿದ್ದರು.

2004 ರಿಂದ 2014ರವರೆಗೆ ದೇಶದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಣ ಹಕ್ಕು, ಆಹಾರ ಹಕ್ಕು, ಮಾಹಿತಿ ಹಕ್ಕು ಮಸೂದೆ ಹಾಗೂ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಆಧಾರ್ ಕಾರ್ಡ್ ಸೇರಿದಂತೆ ಸಾಕಷ್ಟು ಬಡ ವರ್ಗಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಮತ್ತೊಬ್ಬ ಸದಸ್ಯ ಬಳೇಪೇಟೆ ಲಿಂಗರಾಜುಮೂರ್ತಿ ಮಾತನಾಡಿ, ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಮನಮಹೋನ್ ಸಿಂಗ್ ಅವರು ಒಬ್ಬ ಸರಳ, ಸಜ್ಜನ ಪ್ರಾಮಾಣಿಕ ರಾಜಕೀಯ ವ್ಯಕ್ತಿಯಾಗಿದ್ದರು ಎಂದರು.

ಪ.ಪಂ. ಸದಸ್ಯರಾದ ಮಹೇಶ್, ರವಿ, ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯರಾದ ಬಳೇಪೇಟೆ ಲಿಂಗರಾಜುಮೂರ್ತಿ, ಮುನವ್ವರ್ ಬೇಗ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಗುಂಬಳ್ಳಿ ರಾಜಣ್ಣ, ಮಲ್ಲು, ಪ್ರಕಾಶ್, ರಾಚಶೆಟ್ಟಿ, ಉಪ್ಪಿನಮೋಳೆ ಮಹೇಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net