ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಕಾಳಜಿ ವಹಿಸಲಿ

28 gkp 02.
Published on

ಗೋಣಿಕೊಪ್ಪಲು : ಪೊನ್ನಂಪೇಟೆ ತಾಲೂಕಿನಲ್ಲಿ ಬ್ಲಡ್ ಬ್ಯಾಂಕ್ ಕೇಂದ್ರ ಆರಂಭಿಸಲು ಜನಪ್ರತಿನಿಧಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಲೋಪಮುದ್ರಾ ಆಸ್ಪತ್ರೆ ತಜ್ಞ ಡಾ. ಅಮೃತ್ ನಾಣಯ್ಯ ಹೇಳಿದರು. ನಗರದ ಉಮಾಮಹೇಶ್ವರಿ ಸಭಾಂಗಣದಲ್ಲಿ ಬುಧವಾರ ಶಿವಾಜಿ ಸೇನೆ ವತಿಯಿಂದ ಹಮ್ಮಿಕೊಂಡಿದ್ದ

2ನೇ ವರ್ಷದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕೊಡಗಿನಲ್ಲಿ ರಕ್ತದ ಅಗತ್ಯತೆ ಹೆಚ್ಚಾಗಿದೆ. ಸಾಕಷ್ಟು ಸಂಘ ಸಂಸ್ಥೆಗಳು ರಕ್ತದಾನ ಶಿಬಿರದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರೂ ರಕ್ತದ ಕೊರತೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದೆ ಬರುವಂ ತಾಗಬೇಕು. ಸಂಘ ಸಂಸ್ಥೆಗಳು ಆಗಾಗ್ಗೆ ರಕ್ತದಾನ ಶಿಬಿರಗಳು ಆಯೋಜಿಸಬೇಕು. ಇದರಿಂದ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದಂತಾಗುತ್ತದೆ ಎಂದರು.

ಹಲವು ಸಂದರ್ಭದಲ್ಲಿ ದೂರದ ಮಡಿಕೇರಿಗೆ ತೆರಳಿ ರಕ್ತ ತರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೊನ್ನಂಪೇಟೆ ತಾಲೂಕಿನಲ್ಲಿ ನೂತನವಾಗಿ ಬ್ಲಡ್ ಬ್ಯಾಂಕ್ ಆರಂಭವಾಗಬೇಕು. ಕೇಂದ್ರವನ್ನು ಆರಂಭಿಸಲು ಜನಪ್ರತಿನಿಧಿಗಳು, ಶಾಸಕರು ವಿಶೇಷ ಆಸಕ್ತಿ ವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಒತ್ತಡ ತರುವ ಕೆಲಸ ಮಾಡಬೇಕು ಎಂದರು.

ಕಾಪ್ಸ್ ವಿದ್ಯಾಸಂಸ್ಥೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಣ್ಣಳಮಾಡ ಮಾನಸ ತಿಮ್ಮಯ್ಯ ಮಾತನಾಡಿ,ಇತ್ತೀಚಿನ ದಿನಗಳಲ್ಲಿ ರಕ್ತದ ಅಗತ್ಯತೆ ಅರಿವು ಎಲ್ಲರಿಗೂ ಇದೆ. ಆದರೂ ರಕ್ತದಾನ ಮಾಡಲು ಸಾಮಾನ್ಯವಾಗಿ ಯಾರೂ ಮುಂದೆ ಬರಲು ಆಸಕ್ತಿ ತೋರುತ್ತಿಲ್ಲ. ರಕ್ತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಬೇಕು. ಸಂಘ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿರುವುದು ಅತ್ಯಂತ ಶ್ಲಾಘನೀಯ. ನೂತನ ಬ್ಲಡ್ ಬ್ಯಾಂಕ್ ಆರಂಭಕ್ಕೆ ಸಮಾಜದ ಎಲ್ಲರೂ ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಇಲ್ಲಿಂದಲೇ ಆರಂಭವಾಗಲಿ ಎಂದು ಆಶಿಸಿದರು.

ಶಿವಾಜಿ ಸೇನೆ ಅಧ್ಯಕ್ಷ ಎಲ್.ಎನ್.ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಗೌರವ ಅಧ್ಯಕ್ಷ ಗಯಾ ಕಾವೇರಪ್ಪ, ಮಡಿಕೇರಿ ಬ್ಲಡ್ ಬ್ಯಾಂಕಿನ ಡಾ.ಗಾಯತ್ರಿ, ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಎನ್.ಎಸ್. ಕಂದಾದೇವಯ್ಯ, ಉಮಾಮಹೇಶ್ವರಿ ದೇವಾಲಯ ಟ್ರಸ್ಟಿ ರಾಜ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ಹಲವಾರು ಬಾರಿ ರಕ್ತದಾನ ನೀಡಿದ ವಿ.ವಿ.ಅರುಣ್ ಕುಮಾರ್, ಪ್ರಿಯಾ, ಕುಲ್ಲಚಂಡ ಪ್ರಮೋದ್ ಗಣಪತಿ,ವೈದ್ಯರಾದ ಡಾ.ಅಮೃತ್ ನಾಣಯ್ಯ,ಅಣ್ಣಳಮಾಡ ಮಾನಸ ತಿಮ್ಮಯ್ಯ ಅವರನ್ನು ಗೌರವಿಸಲಾಯಿತು. ವಿವಿಧ ಭಾಗದಿಂದ ಆಗಮಿಸಿದ್ದ ಯುವಕ ಯುವತಿಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಖಜಾಂಜಿ ಜಿ.ಪಿ.ಸ್ವಾಮಿ, ನಿರ್ದೇಶಕರಾದ ಎ.ಜಿ.ಸುರೇಶ್, ಸದಸ್ಯರುಗಳಾದ ಡಿ.ಎ.ವಿನೋದ್, ಅಕ್ಷಯ್, ಸುಮೀತ್, ದೀಪಕ್, ಕಿರಣ, ರಿಜ್ವಾನ್, ರಾಜೇಶ್, ಸತೀಶ್, ಮಧು, ಸುಧೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net