

ಬೀದರ್: ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ವೈದ್ಯಕೀಯ ನಿರ್ದೇಶಕರನ್ನಾಗಿ ಡಾ.ಶಿವಕುಮಾರ ಶೆಟಕಾರ್ ಅವರಿಗೆ ಮರು ನೇಮಕ ಮಾಡುವ ಮೂಲಕ ರಾಜ್ಯ ಸರ್ಕಾರ ಭ್ರಷ್ಟಾಚಾರ ಆರೋಪಗಳನ್ನು ಹೊತ್ತವರ ಬೆನ್ನಿಗೆ ನಿಂತಿರುವುದು ಸ್ಪಷ್ಟವಾಗುತ್ತಿದೆ ಎಂದು ಇಲ್ಲಿಯ ಹೈದರಾಬಾದ್ ಕರ್ನಾಟಕ ಆರ್ ಟಿಐ ಆ್ಯಕ್ಟಿವಿಸ್ಟ್ ಅಸೋಸಿಯೇಷನ್ ಉಪಾಧ್ಯಕ್ಷ ಅಂಗದ್ ಪಾಟೀಲ್ ದೂರಿದ್ದಾರೆ.
ಡಾ. ಶೆಟಕಾರ್ ಅವರು ಈ ಹಿಂದೆ ವೈದ್ಯಕೀಯ ಅಧೀಕ್ಷಕರಿದ್ದಾಗ ಬ್ರಿಮ್ಸ್ ನಲ್ಲಿ ಬೆಳಕಿಗೆ ಬಂದ ನಾನಾ ಅಕ್ರಮಗಳಲ್ಲಿ ಭಾಗಿಯಾದ ಆರೋಪಗಳಿಗೆ ಗುರಿಯಾಗಿದ್ದಾರೆ. ಇಂಥವರಿಗೆ ಮತ್ತೆ ಅದೇ ಹುದ್ದೆಗೆ ಮರು ನೇಮಿಸಿದ್ದು ಸರಿಯಲ್ಲ. ಕೂಡಲೇ ಇವರಿಗೆ ಎತ್ತಂಗಡಿ ಮಾಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಡಾ.ಶೆಟಕಾರ್ ಅವರ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ನಡೆಯುತ್ತಿವೆ. ಎಸಿಬಿಯಲ್ಲೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿದ್ದು, ಹೈಕೋಟ್೯ ನಲ್ಲಿ ವಿಚಾರಣೆ ಬಾಕಿಯಿದೆ. ಹೀಗಿದ್ದಾಗಲೂ ಕಳೆದ ಅಕ್ಟೋಬರ್ 21ರಂದು ವೈದ್ಯಕೀಯ ಶಿಕ್ಷಣ ನಿರ್ದೇಶಕರು ಇವರಿಗೆ ಪುನಃ ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಸ್ಥಾನಕ್ಕೆ ಮರು ನೇಮಕ ಮಾಡಿರುವುದರಿಂದ ಅಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆ, ಸಾಕ್ಷಿಗಳು ನಾಶಪಡಿಸುವ ಸಾಧ್ಯತೆಗಳಿವೆ ಎಂದು ಗಮನ ಸೆಳೆದಿದ್ದಾರೆ.
ಬ್ರಿಮ್ಸ್ ಆಸ್ಪತ್ರೆ ಒಪಿಡಿ ಚೀಟಿಗಳಿಂದ (ಬಳಕೆದಾರರ) ಪ್ರತಿ ನಿತ್ಯ 40-50 ಸಾವಿರ ರೂ. ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾದ ಸುಮಾರು 81 ದಿನಗಳ ಹಣವನ್ನು ಡಾ.ಶೆಟಕಾರ್ ಅವರು ಸರ್ಕಾರಕ್ಕೆ ಜಮೆ ಮಾಡದೆ ದುರ್ಬಳಕೆ ಮಾಡಿಕೊಂಡ ಬಗ್ಗೆ ಎಸಿಬಿ ಎದುರು ಆರೋಪ ಎದುರಿಸುತ್ತಿದ್ದಾರೆ. ಅಂಗವಿಕಲರಿಗೆ ಬೋಗಸ್ ಪ್ರಮಾಣಪತ್ರ ವಿತರಣೆ ಮಾಡಿದ ಸಂಬಂಧ ಜಿಪಂ ಸಿಇಒ ಪತ್ರದ ಮೇಲೆ ವಿಚಾರಣೆ ನಡೆದಿದೆ. ಚೆಕ್ ಬೌನ್ಸ್ ಸಂಬಂಧ ಬೀದರ್ ಕೋಟ್೯ ನಲ್ಲಿ ಪ್ರಕರಣವಿದೆ. ಈ ಎಲ್ಲ ಕಾರಣಗಳಿಂದ ಇವರು ಮಹತ್ವದ ವೈದ್ಯಕೀಯ ಅಧೀಕ್ಷಕ ಹುದ್ದೆ ನಿರ್ವಹಿಸುವುದು ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಹೀಗಾಗಿ ಕೂಡಲೇ ವಿಷಯ ಗಂಭಿರ ಪರಿಗಣಿಸಿ ಕ್ರಮಕ್ಕೆ ಮುಂದಾಗುವಂತೆ ಕೋರಿದ್ದಾರೆ.
ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಸ್ಥಾನಕ್ಕೆ ಡಾ. ಶಿವಕುಮಾರ ಶೆಟಕಾರ್ ಅವರಿಗೆ ಮರು ನೇಮಕ ಮಾಡಿದ ಸರ್ಕಾರದ ಕ್ರಮ ಪೂರ್ಣ ತಪ್ಪಿನಿಂದ ಕೂಡಿದೆ. ಭ್ರಷ್ಟಾಚಾರ ಆರೋಪಗಳಲ್ಲಿ ವಿಚಾರಣೆ ಎದುರಿಸುತ್ತಿದ್ದವರಿಗೆ ಪುನಃ ಅದೇ ಸ್ಥಾನದಲ್ಲಿ ನಿಯೋಜಿಸಿದ್ದು ಸರಿಯಲ್ಲ. ಕೂಡಲೇ ದೂರಿನ ಮೇಲೆ ಕ್ರಮ ಜರುಗಿಸದಿದ್ದರೆ ಹೈಕೋಟ್೯ ನಲ್ಲಿ ದಾವೆ ಹೂಡವೆ.| ಅಂಗದ್ ಪಾಟೀಲ್,ಹೈಕ ಆರ್ ಟಿಐ ಅಸೋಷಿಯೇಷನ್ ಉಪಾಧ್ಯಕ್ಷ