

ಬೀದರ್: ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್)ಗೆ ಗುರುವಾರ ವಿಧಾನಸಭೆಯ ಭರವಸೆಗಳ ಸಮಿತಿ ತಂಡ ಭೇಟಿ ನೀಡಿ ವಿವಿಧ ನೇಮಕ ಮತ್ತು ಉಪಕರಣ ಖರೀದಿ ಅಕ್ರಮಕ್ಕೆ ಸಂಬಂಧಿಸಿದಂತೆ ಸುದೀರ್ಘ ಪರಿಶೀಲನೆ ನಡೆಸಿತು. ಉಡುಪಿ ಶಾಸಕರೂ ಆದ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ನೇತೃತ್ವದ ತಂಡವು ಸಮಗ್ರ ಮಾಹಿತಿ ಕಲೆ ಹಾಕಿತು. ಇಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಸಮಿತಿ ಅಚ್ಚರಿ, ಆತಂಕ ವ್ಯಕ್ತಪಡಿಸಿತು.
ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ರಘುಪತಿ ಭಟ್ ಅವರು, ವಿವಿಧ ತನಿಖಾ ವರದಿಗಳನ್ನು ನೋಡಿದರೆ ಬ್ರಿಮ್ಸ್ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಗೊತ್ತಾಗುತ್ತದೆ. ಆದರೆ ಈವರೆಗೂ ತಪ್ಪಿತಸ್ಥರ ವಿರುದ್ಧ ಕ್ರಮ ಮಾತ್ರ ಜರುಗದಿರುವುದು ಅಚ್ಚರಿ ತಂದಿದೆ. ಬೆಂಗಳೂರಿನಲ್ಲಿ ಮುಂದಿನ ವಾರ ಸಭೆ ನಡೆಸಿ, ಇಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸಿ ತಾರ್ಕಿಕ ಅಂತ್ಯ ಹಾಡಲಾಗುತ್ತದೆ. ಈ ಪ್ರಕರಣ ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.
ಇಲ್ಲಿ ಭೇಟಿ ನೀಡಿದ ವೇಳೆ ಅವ್ಯವಹಾರ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. ಸಂಬಂಧಿಸಿದರಿಂದ ಹೇಳಿಕೆ ಪಡೆಯಲಾಗಿದೆ. ಈ ವಿಷಯ ಸಂಬಂಧ ಬೆಂಗಳೂರಿನಲ್ಲಿ ಮುಂದಿನ ವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗುವುದು. ತಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿರಲು ಕಾರಣಗಳೇನು ? ಸರ್ಕಾರವು ಭರವಸೆ ನೀಡಿ 12 ವರ್ಷ ಕಳೆದರೂ ಕ್ರಮಕ್ಕೆ ವಿಳಂಬ ಮಾಡಿದ್ದೇಕೆ? ಎಂಬಿತ್ಯಾದಿ ಕುರಿತು ಚರ್ಚಿಸಲಾಗುವುದು. ಇಲ್ಲಿನ ಅಕ್ರಮದಲ್ಲಿನ ತಪ್ಪಿತಸ್ಥರ ವಿರುದ್ಧ ತಿಂಗಳೊಳಗೆ ಕ್ರಮ ಖಚಿತ ಎಂದು ಸ್ಪಷ್ಟಪಡಿಸಿದರು.
ಹಿಂದಿನ ನಿರ್ದೇಶಕ ಡಾ. ಚನ್ನಣ್ಣ, ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಶೆಟಕಾರ, ಹಿಂದಿನ ಸಿಇಒ ಡಾ. ಆನಂದಸಾಗರ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಎರಡು ಪ್ರತ್ಯೇಕ ಸಮಿತಿಗಳು ತನಿಖೆ ನಡೆಸಿ ವಿವಿಧ ಅಕ್ರಮ ಬೆಳಕಿಗೆ ತಂದಿತ್ತು. ತಪ್ಪಿತಸ್ಥರ ವಿರುದ್ಧ ವರದಿ ಸಹ ನೀಡಿದ್ದರು. ವರದಿಯಲ್ಲಿ ಉಲ್ಲೇಖಿತ ಪ್ರಕಾಶ ಮಡಿವಾಳ, ಪ್ರಕಾಶ ಮಾಳಗೆ, ವರ್ಷಾ ಅವರು ಇನ್ನೂ ಬ್ರಿಮ್ಸ್ ನಲ್ಲಿಯೇ ಕೆಲಸದಲ್ಲಿ ಮುಂದುವರೆದಿದ್ದಾರೆ. ಬ್ರಿಮ್ಸ್ ಆರಂಭದಿಂದ ಈವರೆಗೂ ಹಲವು ಭಾನಗಡಿ ನಡೆದರೂ ಯಾರ ಮೇಲೂ ಕ್ರಮ ಜರುಗದಿರುವುದು ವಿಚಿತ್ರವೆನಿಸಿದೆ ಎಂದರು.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಆರ್ಥಿಕ ಸಲಹೆಗಾರ ವಿ.ಡಿ. ನಿಶ್ಚಿತ್ ಹಾಗೂ ಹಿಂದಿನ ಜಿಪಂ ಸಿಇಒ ಉಜ್ವಲಕುಮಾರ ಘೋಷ್ ಅವರ ಸಮಿತಿ ಸಹ ನಾನಾ ಅಕ್ರಮ ಆರೋಪಗಳ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸಿ ವರದಿ ನೀಡಿದ್ದರು. ಇದರಲ್ಲಿ ಅನೇಕ ಅವ್ಯವಹಾರ ಬಯಲಾಗಿವೆ. ತಪ್ಪಿತಸ್ಥರ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿತ್ತು. ಇಷ್ಟಿದ್ದರೂ ತಪಿತಸ್ಥರ ನೌಕರರ ವಿರುದ್ಧ ಕನಿಷ್ಠ ಅಮಾನತು ಕ್ರಮವೂ ಜರುಗಿಲ್ಲ. ಮತ್ತೆ ಕೆಲವರು ಬ್ರಿಮ್ಸ್ ನಲ್ಲೇ ಸೇವೆಯಲ್ಲಿ ಮುಂದುವರೆದಿರುವುದು ನೋಡಿದರೆ ಇಲ್ಲಿ ಭಾರಿ ಪ್ರಮಾಣ ರಾಜಕೀಯ ಲಾಬಿ ನಡೆದಿರುವುದು ಸ್ಪಷ್ಟವಾಗುತ್ತಿದೆ. ಬ್ರಿಮ್ಸ್ ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಸಮಿತಿಗೆ 139 ಮಂದಿ ದೂರು ನೀಡಿದ್ದಾರೆ ಎಂದರು.
ಸಮಿತಿ ಸದಸ್ಯರಾದ ಡಾ. ಕೆ.ಶ್ರೀನಿವಾಸಮೂರ್ತಿ, ಹರೀಶ್ ಪುಂಜ, ಸೋಮನಗೌಡ ಪಾಟೀಲ್, ಸಂಜೀವ ಮಠಂದೂರ, ದತ್ತಾತ್ರೇಯ ಪಾಟೀಲ್ ರೇವೂರ್ ಇದ್ದರು.
ತಪ್ಪಿತಸ್ಥರಿಗೆ ರಕ್ಷಿಸಲಾಗ್ತಿದೆ
ಕಳೆದ 12 ವರ್ಷಗಳಿಂದ ಬ್ರಿಮ್ಸ್ ಅವ್ಯವಹಾರ ಚರ್ಚೆ ಯಲ್ಲಿದೆ. ಜಿಲ್ಲೆಯ ಶಾಸಕರು ವಿಧಾನಸಭೆಯಲ್ಲಿ ಈ ವಿಷಯ ಪ್ರಶ್ನಿಸಿದ್ದರು. ಅಂದಿನ ವೈದ್ಯಕೀಯ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಚಿಸಿದ ತನಿಖಾ ತಂಡಗಳು ಇಲ್ಲಿ ಅವ್ಯವಹಾರ ನಡೆದಿರುವುದನ್ನು ಪತ್ತೆ ಹಚ್ಚಿ ವರದಿ ನೀಡಿದ್ದವು. ಇಲ್ಲಿ ಬಹಳಷ್ಟು ನ್ಯೂನತೆಗಳು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಕ್ರಮ ಜರುಗಿಲ್ಲ. ಬದಲಾಗಿ ಇಲ್ಲಿಯ ತಪ್ಪಿತಸ್ಥರಿಗೆ, ಅಕ್ರಮದಲ್ಲಿ ಶಾಮೀಲಾಗಿರುವ ಆರೋಪಿಗಳಿಗೆ ರಕ್ಷಿಸುವ ಕೆಲಸ ನಡೆಯುತ್ತಿವೆ ಎಂದು ರಘುಪತಿ ಭಟ್ ಹೇಳಿದರು.
ಸರ್ಕಾರದಿಂದ ಸಮಿತಿ ರಚನೆ
ವಿಧಾನಸಭೆ ಭರವಸೆಗಳ ಸಮಿತಿ ಬ್ರಿಮ್ಸ್ ಭೇಟಿ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಸಮಿತಿ ರಚಿಸಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಂಗಪ್ಪ ಹುಚ್ಚಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಅಪರ ಜಿಲ್ಲಾಧಿಕಾರಿಗೆ ದಂಡಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ರಘುಪತಿ ಭಟ್ ತಿಳಿಸಿದರು. ಭರವಸೆಗಳ ಸಮಿತಿ ಬ್ರಿಮ್ಸ್ ಅವ್ಯವಹಾರ ವಿಷಯ ಗಂಭೀರವಾಗಿ ತೆಗೆದುಕೊಂಡಿದ್ದು, ಆರೋಗ್ಯ, ವೈದ್ಯಕೀಯ ಸಚಿವರಿಗೆ ಭೇಟಿ ಮಾಡಿ ಸರ್ಕಾರದ ಭರವಸೆ ಈಡೇರಿಕೆಗಾಗಿ ಕ್ರಮ ಕೈಗೊಳ್ಳುವಂತೆ ಚರ್ಚಿಸಲಾಗುವುದು. ಇನ್ಮುಂದೆ ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ. ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವ ಹಿನ್ನಲೆಯಲ್ಲೇ ಸಮಿತಿ ಇಲ್ಲಿಗೆ ಬಂದಿದೆ ಎಂದು ಹೇಳಿದರು.
ಬ್ರಿಮ್ಸ್ ನಲ್ಲಿ ಮೇಲಿಂದ ಮೇಲೆ ನಾನಾ ಅವ್ಯವಹಾರ ನಡೆದಿವೆ. ವಿವಿಧ ಹಂತದ ವಿಚಾರಣೆಯ ವೇಳೆ ಅವ್ಯವಹಾರ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿವೆ. ಆದರೂ ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಬೇಸರ ತಂದಿದೆ. ಇಲ್ಲಿನ ಭ್ರಷ್ಟಾಚಾರಕ್ಕೆ ತಾರ್ಕಿಕ ಅಂತ್ಯ ಹಾಡದಿದ್ದರೆ ಇದು ಅಕ್ರಮದ ಗೂಡಾಗುತ್ತದೆ.| ಕೆ.ರಘುಪತಿ ಭಟ್ವಿಧಾನಸಭೆ ಭರವಸೆಗಳ ಸಮಿತಿ ಅಧ್ಯಕ್ಷ