

ಬೀದರ್: ಇಲಿ ಕಚ್ಚಿ ಎರಡು ದಿನದ ಕೂಸು ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರು ಎರಡನೇ ದಿನವಾದ ಶುಕ್ರವಾರವೂ ಇಲ್ಲಿನ ಬ್ರಿಮ್ಸ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನೀಡಿದರು.
ಚಿಕಿತ್ಸಾ ಕೋಣೆಗಳಲ್ಲಿ ಇಲಿಗಳು ಬರದಂತೆ ಪೆಸ್ಟ್ ಕಂಟ್ರೋಲ್ ಅಳವಡಿಸಿರುವುದನ್ನು ಖುದ್ದು ವೀಕ್ಷಿಸಿದರು. ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿನ ಚಿಕಿತ್ಸಾ ಕೋಣೆಯಲ್ಲಿನ ಶೌಚಗೃಹ ವೀಕ್ಷಿಸಿ, ಶುಚಿಯಾಗಿಡುವಂತೆ ತಿಳಿಸಿದರು. ಕಿಟಕಿಗಳ ಸುತ್ತಲಿರುವ ಕಲ್ಮಶ ತೆಗೆದು ಸ್ವಚ್ಛಗೊಳಿಸಬೇಕು. ಪ್ರತಿಯೊಂದು ವಾರ್ಡ್ನಲ್ಲಿನ ಕಿಟಕಿಗಳು ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಇಲಿಗಳು ಹರಿದು ಬಾರದಂತೆ ರಂಧ್ರಗಳನ್ನು ಕೂಡಲೇ ಮುಚ್ಚುವಂತೆ ಕ್ರಮ ವಹಿಸಲು ಸೂಚಿಸಿದರು.
ಕಟ್ಟಡದಲ್ಲಿನ ನೀರು ಹರಿದು ಹೋಗಲು ಇರುವ ರಂಧ್ರಗಳ ಮೂಲಕವೂ ಇಲಿಗಳು ನುಸುಳಿ ಬರಬಹುದಾಗಿರುವುದರಿಂದ ಇದಕ್ಕೆ ಜರಡಿ ಅಳವಡಿಸಬೇಕು. ಎಲ್ಲ ಚಿಕಿತ್ಸಾ ವಾರ್ಡ್ಗಳಲ್ಲಿಯ ಕಿಟಕಿಗಳು ದುರಸ್ತಿ ಮತ್ತು ರಂಧ್ರ ಮುಚ್ಚಲು ಆಗುವ ವೆಚ್ಚದ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಬೇಕು. ದುರಸ್ತಿ ಕಾರ್ಯ ತೀವ್ರವಾಗಿ ಮಾಡಬೇಕು ಎಂದು ತಿಳಿಸಿದರು.
ಆಸ್ಪತ್ರೆಯ ವಿವಿಧ ಕೋಣೆಗಳನ್ನು ವೀಕ್ಷಿಸಿದ ಡಿಸಿ ಅವರು, ಯಾವುದೇ ಕೋಣೆಯೂ ಮಳೆ ನೀರಿನಿಂದ ಸೋರಬಾರದು. ನೀರು ಸರಾಗ ಹರಿದುಹೋಗುವಂತೆ ನೋಡಿಕೊಂಡು ಆಸ್ಪತ್ರೆ ಕಟ್ಟಡದ ಸುರಕ್ಷತೆಗಾಗಿ ಒತ್ತು ಕೊಡಬೇಕು. ಪ್ರತಿ ದಿನವೂ ಲಿಫ್ಟ್ ಸ್ಯಾನಿಟೈಜ್ ಮಾಡಬೇಕು. ಕರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕೆಂದು ಬ್ರಿಮ್ಸ್ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿರುವ ವೇಳೆ ಕಿಟಕಿ ದುರಸ್ತಿ ಮಾಡಿ ಅದರ ಚಿತ್ರ ಹಾಕಬೇಕೆಂದು ತಿಳಿಸಿದಂತೆ ಕೆಲ ಗಂಟೆಗಳಲ್ಲಿ ಆಸ್ಪತ್ರೆಯಲ್ಲಿನ ಕಿಟಕಿಗಳ ಶುಚಿತ್ವ ಮತ್ತು ದುರಸ್ತಿ ಕಾರ್ಯ ಆರಂಭವಾಯಿತು. ಬ್ರಿಮ್ಸ ನಿರ್ದೇಶಕ ಡಾ. ಶಿವಕುಮಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರತಿಕಾಂತ ಸ್ವಾಮಿ, ಡಾ. ಮಹೇಶ ತೋಂಡಾರೆ ಇತರರಿದ್ದರು.