

ಶೃಂಗೇರಿ: ಶ್ರೀಮಠದ ಅಧಿದೇವತೆ ಶ್ರೀ ಶಾರದೆ ಬ್ರಾಹ್ಮೀ ಅಲಂಕಾರದಲ್ಲಿ ಮಂಗಳವಾರ ಕಂಗೊಳಿಸಿದಳು. ಸಾರಸ್ವತದ ಸಂಕೇತವಾದ ಕಮಂಡಲು, ಅಕ್ಷಮಾಲೆ, ಪುಸ್ತಕ, ಪಾಶ ಮತ್ತು ಚಿನ್ಮುದ್ರೆ ಧರಿಸಿ ಅತಿಶಯವಾದ ನಡಿಗೆಯ ಪ್ರಾವೀಣ್ಯತೆಗೆ ಹೆಸರಾದ ಹಂಸವನ್ನು ಏರಿ ಭಕ್ತರನ್ನು ಅನುಗ್ರಹಿಸಿದಳು. ಶರತ್ಕಾಲದ ಶುಭ್ರವಾದ ಮೋಡಗಳನ್ನು ಹೋಲುವ ವಸ್ತ್ರಗಳನ್ನು ಧರಿಸಿದವಳೇ... ಬ್ರಹ್ಮನ ಹೃದಯದಲ್ಲಿ ವಿಹರಿಸುವವಳೇ... ವಾಗ್ದೇವಿ ಶಾರದೆ ನನ್ನನ್ನು ಸಲಹು ಎಂದು ಜಗದ್ಗುರು ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತೀ ಸ್ವಾಮೀಜಿ ಶಾರದೆಯ ಕುರಿತು ರಚಿಸಿರುವ ಶ್ಲೋಕದಂತೆ ಭವ್ಯರೂಪದಲ್ಲಿ ವಿರಾಜಮಾನಳಾಗಿದ್ದ ಮಹೋನ್ನತ ಅಲಂಕಾರ ಭಕ್ತರ ಗಮನ ಸೆಳೆಯಿತು. ಶ್ರೀಮಠದಲ್ಲಿ ಮಾಧವೀಯ ಶಂಕರ ದಿಗ್ವಿಜಯ, ಲಲಿತೋಪಾಖ್ಯಾನ, ಲಕ್ಷ್ಮೀನಾರಾಯಣ ಹೃದಯ ಮುಂತಾದ ಪಾರಾಯಣ, ಜಪ, ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಜಗನ್ಮಾತೆಯ ಆವಾಸಸ್ಥಾನವೆಂದು ಶಾಸ್ತ್ರದಲ್ಲಿ ತಿಳಿಸಿರುವ ಶ್ರೀಚಕ್ರಕ್ಕೆ ನವಾವರಣ ಪೂಜೆ, ಸುವಾಸಿನೀ ಮತ್ತು ಕುಮಾರೀ ಪೂಜೆ, ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿಗಳಿಂದ ಶಾರದೆಗೆ ವಿಶೇಷ ಪೂಜೆ ನಡೆಯಿತು.
ಸಂಜೆ ವಿದ್ವಾನ್ ವಿ.ಸನತ್ಕುಮಾರ್ ವೃಂದದವರಿಂದ ವಯಲಿನ್ ವಾದನ ನೆರವೇರಿತು. ಮೆಣಸೆ ಗ್ರಾಪಂ ವ್ಯಾಪ್ತಿಯ ಗೀರ್ವಾಣಿ ಮಹಿಳಾ ಮಂಡಳಿ, ಕುಂಚೇಬೈಲು ಪ್ರಜ್ಞಾ ಯುವಕ ಸಂಘ, ಶ್ರೀಬೀದಿ ಉತ್ಸವದಲ್ಲಿ ಶಾರದಾಂಬಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಸಂಘ, ಕೆರೆಮನೆ ಆದರ್ಶ ರೈತಮಿತ್ರ ಕೂಟ, ಮೆಣಸೆ ವ್ಯಾಪ್ತಿಯ ಸಂಘ ಸಂಸ್ಥೆಗಳು, ದೇವಾಲಯಗಳು, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ರಾತ್ರಿ ನಡೆದ ದರ್ಬಾರು ಹಾಗೂ ಒಳಪ್ರಾಂಗಣದ ರಥೋತ್ಸವದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭಾಗಿಯಾದರು. ವೇದ ಪಾರಾಯಣ, ಸಂಗೀತ, ಸರ್ವವಾದ್ಯ ಸೇವೆ, ದೇವಿಗೆ ಮಹಾಮಂಗಳಾರತಿ ಇತ್ಯಾದಿ ಧಾರ್ವಿುಕ ಕಾರ್ಯಕ್ರಮಗಳು ನೆರವೇರಿದವು.