

ಹುಬ್ಬಳ್ಳಿ: ಜ್ಞಾನ ಹಂಚುವವ ಬ್ರಾಹ್ಮಣ. ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಕ್ಷತ್ರಿಯ. ಅಭಾವದ ವಿರುದ್ಧ ಹೋರಾಟ ಮಾಡುವವ ವೈಶ್ಯ. ಆಲಸ್ಯ ಹೋಗಲಾಡಿಸುವವ ಶೂದ್ರ. ಸಮಾಜದಲ್ಲಿ ಬ್ರಾಹ್ಮಣ ಶ್ರೇಷ್ಠ, ಶೂದ್ರ ಕನಿಷ್ಠ ಎಂಬ ತರತಮವಿಲ್ಲ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಜ್ಯಾಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಗೋಪಿನಾಥ ಅಭಿಪ್ರಾಯಪಟ್ಟರು.
ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ವತಿಯಿಂದ ಇಲ್ಲಿನ ದೇಶಪಾಂಡೆನಗರ ಶ್ರೀ ಕೃಷ್ಣ ಕಲ್ಯಾಣಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ 108 ಸತ್ಯನಾರಾಯಣ ಪೂಜೆ ಹಾಗೂ ಧಾರವಾಡ ಜಿಲ್ಲಾ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬ್ರಾಹ್ಮಣರು ಯಾವತ್ತೂ ಶೂದ್ರರ ಮೇಲೆ ದಬ್ಬಾಳಿಕೆ, ಅನಾಚಾರ ಮಾಡಿಲ್ಲ. ಜಾತಿ ತಾರತಮ್ಯ ಮಾಡಿಲ್ಲ. ಹೀಗಾಗಿ ಬ್ರಾಹ್ಮಣರ ಮೇಲೆ ಯಾರಾದರೂ ಆರೋಪ ಮಾಡಲು ಬಂದರೆ ಅವರಿಗೆ ತಿಳಿವಳಿಕೆ ನೀಡಬೇಕು ಎಂದರು.
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ರಾಜ್ಯ ಸರ್ಕಾರ ನೆರವಿಗೆ ಧಾವಿಸುವಂತೆ ರಾಜ್ಯ ಸರ್ಕಾರಕ್ಕೆ ಮೂರು ಸಲ ಮನವಿ ಮಾಡಲಾಗಿದೆ. ಇದಕ್ಕೆ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ. ಬ್ರಾಹ್ಮಣರ ಕ್ಷೇಮಾಭಿವೃದ್ಧಿಗೆ ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ ಇತರೆ ರಾಜ್ಯಗಳಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ರಾಜ್ಯದಲ್ಲೂ ಇದು ಆಗಲು ಆಂದೋಲನ ನಡೆಸುವ ಅಗತ್ಯವಿದೆ ಎಂದರು.
ವಿದ್ಯಾವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಮಹಿಳೆಯರು ತುಳಸಿ ಪೂಜೆ, ನೇವೈದ್ಯ, ರಂಗೋಲಿ ಹಾಕುವ ಮೂಲಕ ಬ್ರಾಹ್ಮಣರಿಗೆ ರಕ್ಷಣೆ ನೀಡತ್ತಿದ್ದಾರೆ. ಬ್ರಾಹ್ಮಣರೊಳಗೆ ಸಂಸ್ಕಾರವಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಬ್ರಾಹ್ಮಣರು. ಆದರೆ, ಸರ್ಕಾರ ಮೀಸಲಾತಿ ಹೆಸರಿನಲ್ಲಿ ನಮಗೆ ಏನು ಕೊಟ್ಟಿದೆ?. ಸರ್ಕಾರ ಕೈ ಬಿಟ್ಟರೂ ಪರಮಾತ್ಮ ನಮ್ಮನ್ನು ಕೈ ಬಿಟ್ಟಿಲ್ಲ. ಆದ್ದರಿಂದ ನಮ್ಮ ಮಕ್ಕಳಿಗೆ ಪ್ರಪಂಚ ಕಟ್ಟುವಂಥ ಸಂಸ್ಕಾರ ನೀಡಬೇಕು ಎಂದರು.
ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ ಮಾತನಾಡಿ, ಇತ್ತೀಚೆಗೆ ವಿಪ್ರರಲ್ಲಿ ಸಂಘಟನೆ ಶಕ್ತಿ ಕೊರತೆಯಾಗುತ್ತಿದೆ. ಭಾರತೀಯ ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಮಕ್ಕಳಿಗೆ ಸಂಸ್ಕಾರ ನೀಡುವುದರ ಜತೆಗೆ ಉತ್ತಮ ಶಿಕ್ಷಣ ಕೊಡಿಸುವ ಅಗತ್ಯವಿದೆ ಎಂದರು.
ನಮ್ಮ ಆತ್ಮರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು. ಸತ್ಯದ ಪರ ಮಾತನಾಡಿ, ತಪ್ಪು ತಪ್ಪೇ. ನಮ್ಮವರಿಗೆ ಅನ್ಯಾಯವಾಗುತ್ತಿದ್ದರೆ ಸುಮ್ಮನಿರದೇ ಸಹಾಯಕ್ಕೆ ಧಾವಿಸಬೇಕು. ಬ್ರಾಹ್ಮಣರು ತಮ್ಮ ಕೆಲಸಕ್ಕೆ ಬೇರೆಯವರನ್ನು ಅವಲಂಬಿಸುತ್ತಾರೆ ಎಂದು ಕೆಲವರು ಆಟವಾಡಿಸುತ್ತಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸ ಮಾಡುವ ಶಕ್ತಿ ನಿಮಗಿದೆ. ಅದನ್ನು ಬಳಸಿಕೊಳ್ಳಬೇಕು ಎಂದರು.
ಶಿರಸಿ ನೀರ್ಗಾನದ ವಿದ್ವಾಂಸ ವಿಶ್ವನಾಥ ಭಟ್ಟ ಮಹಾಸಂಘದ ರಾಜ್ಯ ಕಾರ್ಯದರ್ಶಿ ಗೋಪಾಲ ಕುಲಕರ್ಣಿ ಮಾತನಾಡಿದರು. ಮಹಾಸಂಘದ ಜಿಲ್ಲಾಧ್ಯಕ್ಷ ಕೆ.ಎನ್. ಪುರೋಹಿತ, ಶತಾಯುಷಿ ನಾಗನೂರ ಆಚಾರ್ಯ, ಡಾ.ವಿ.ಜಿ. ನಾಡಗೌಡ, ಎ.ಸಿ. ಗೋಪಾಲ, ಸುನೀಲ ಗುಮಾಸ್ತೆ, ಶ್ರೀಕಾಂತ ದೇಸಾಯಿ, ರಮೇಶ ಕುಲಕರ್ಣಿ, ಎಂ.ಬಿ. ನಾತು, ಶ್ಯಾಮರಾವ್ ಜೋಶಿ, ಡಾ. ಸಮೀರಾಚಾರ್ಯ ಕಂಠಪಲ್ಲೀ, ವಾಚಸ್ಪತಿ ಶಾಸ್ತ್ರಿ, ಡಾ. ಪವನ ಜೋಶಿ, ಇತರರು ಇದ್ದರು.