ಬ್ರಾಹ್ಮಣ ಸಮ್ಮೇಳನಕ್ಕೆ ಜಿಲ್ಲೆಯಿಂದ ಹೆಚ್ಚಿನ ಜನರು ಬನ್ನಿ

Published on

ಚಾಮರಾಜನಗರ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.18 ಮತ್ತು 19ರಂದು ನಡೆಯಲಿರುವ ರಾಜ್ಯ ಮಟ್ಟದ ಬ್ರಾಹ್ಮಣ ಸಮ್ಮೇಳನಕ್ಕೆ ಚಾಮರಾಜನಗರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣರು ಆಗಮಿಸಬೇಕೆಂದು ರಾಜ್ಯ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ, ನ್ಯಾಯವಾದಿ ಅಶೋಕ ಹಾರನಹಳ್ಳಿ ಮನವಿ ನೀಡಿದರು.

ನಗರದ ಶಂಕರಪುರದ ಶ್ರೀರಾಮಮಂದಿರದ ಸಭಾಂಗಣದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಪ್ರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ನೇತೃತ್ವದಲ್ಲಿ ಸ್ವಾವಲಂಬನೆ, ಸಂಸ್ಕಾರ, ಸಂಘಟನೆ ಸ್ವರೂಪದಲ್ಲಿ ಎರಡು ದಿನಗಳ ಬೃಹತ್ ಬ್ರಾಹ್ಮಣ ಸಮ್ಮೇಳನವನ್ನು ಆಯೋಜಿಸಿದ್ದು, ರಾಷ್ಟ್ರವಲ್ಲದೆ,ದೇಶ ವಿದೇಶಗಳ ಬ್ರಾಹ್ಮಣ ಮುಖಂಡರು, ವಿದ್ವಾಂಸರು, ಚಿಂತಕರು ಶಿಕ್ಷಣ ತಜ್ಞರು, ಉದ್ಯಮಿಗಳು, ಯುವ ಸಮುದಾಯ ಮತ್ತು ಮಹಿಳಾ ಚಿಂತಕರು ಆಗಮಿಸುತ್ತಿದ್ದು ವಿಶೇಷವಾಗಿ ಕೋಟಿ ಗಾಯತ್ರಿ ಜಪ ಯಜ್ಞ ಹಾಗೂ ವಿಪ್ರ ಆಹಾರೋತ್ಸವ ನಡೆಯಲಿದೆ ಎಂದರು.

ಕೋಟಿ ಗಾಯತ್ರಿ ಮಹಾ ಯಜ್ಞದ ಪ್ರಧಾನರೂ ಮತ್ತು ರಾಜ್ಯ ಬ್ರಾಹ್ಮಣ ಮಹಾಸಭೆಯ ಉಪಾಧ್ಯಕ್ಷ ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮ ಮಾತನಾಡಿ, ಅಶೋಕ ಹಾರನಹಳ್ಳಿ ನೇತೃತ್ವದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಸಮ್ಮೇಳನ ಎರಡು ದಿನಗಳ ಕಾಲ ನಡೆಯಲಿದೆ. ಬ್ರಾಹ್ಮಣ ಸಮುದಾಯದ ಸಂಘಟನೆ ಬಹಳ ಮುಖ್ಯವಾಗಿದ್ದು, ಸಮುದಾಯದ ಸರ್ವರೂ ಸಮ್ಮೇಳನದಲ್ಲಿ ಭಾಗವಹಿಸಿ ಸಾಕ್ಷಿ ಆಗಬೇಕು ಎಂದರು.

ವೇದ ವಿದ್ವಾಂಸ ಡಾ. ರಾಘವೇಂದ್ರ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿದರು. ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಎಂ ಹೆಗಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ ಸಂತೆಮರಳ್ಳಿ ಆನಂತರಾಮು, ಬಾಲ ಪ್ರತಿಭೆ ಪೃಥ್ವಿ ಪುನೀತ್ ಅವರನ್ನು ಗೌರವಿಸಲಾಯಿತು.

ಮಹಾಸಭೆಯ ಕೋಶಾಧ್ಯಕ್ಷ ವೆಂಕಟೇಶ ನಾಯಕ್, ಯುವ ವಿಭಾಗದ ಸುನಿಲ್ ಶಾಸಿ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಋಗ್ವೇದಿ, ಜಿಲ್ಲಾ ಖಜಾಂಚಿ ಬಾಲಸುಬ್ರಮಣ್ಯಂ, ತಾಲೂಕು ಅಧ್ಯಕ್ಷ ನಾಗರಾಜು, ಕೊಳ್ಳೇಗಾಲ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶೇಖರ್ ಶಾಸಿ, ಯಳಂದೂರು ಅಧ್ಯಕ್ಷ ರಂಗನಾಥ್, ಗುಂಡ್ಲುಪೇಟೆ ರಾಜಣ್ಣ, ಬೆಂಗಳೂರಿನ ಕೇಂದ್ರ ಸಮಿತಿಯ ರವಿಶಂಕರ್, ಶಂಕರ್ ಪ್ರಸಾದ್, ಪ್ರತಾಪ್ ಮತ್ತು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net