ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ

22-KGL-1,,
Published on

ಕೊಳ್ಳೇಗಾಲ: ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿಪ್ರ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಳ್ಳೇಗಾಲ ತಾಲೂಕಿನ ಬ್ರಾಹ್ಮಣ ಸಮುದಾಯದಿಂದ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಕಾವೇರಿ ರಸ್ತೆಯಲ್ಲಿರುವ ಪ್ರಸನ್ನ ಶ್ರೀರಾಮ ಮಂದಿರದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆದರು. ತಾಲೂಕು ಕಚೇರಿ ಮುಂಭಾಗ ಜಮಾಯಿಸಿ ಧಿಕ್ಕಾರ ಕೂಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. ನಂತರ ಶಿರಸ್ತೇದಾರ್ ಅವರಿಗೆ ಮನವಿ ಪತ್ರ ನೀಡಿದರು.

ಕೊಳ್ಳೇಗಾಲ ತಾಲೂಕು ಬ್ರಾಹ್ಮಣ ಸಮುದಾಯದ ಅಧ್ಯಕ್ಷ ಶಂಕರ್ ಶಾಸ್ತ್ರೀ ಮಾತನಾಡಿ, ಗಾಯಿತ್ರಿ ಮಾತೆಯ ಉಪಾಸನೆ ಮಾಡುವ ಲಂಛನ ಜನಿವಾರವಾಗಿದೆ. ಬ್ರಾಹ್ಮಣ ಸಮುದಾಯದ ಸಂಸ್ಕಾರದಲ್ಲಿ ಜನಿವಾರಕ್ಕೆ ಹೆಚ್ಚಿನ ಪ್ರಾಮುಖ್ಯ ಇರುತ್ತದೆ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ತಮ್ಮ ಸಂಸ್ಕೃತಿ, ಧಾರ್ಮಿಕ ಆಚರಣೆಗೆ ಸ್ವಾತಂತ್ರೃ ನೀಡಿದ್ದಾರೆ. ಆದರೆ, ಅಧಿಕಾರಿಗಳು ಮಕ್ಕಳಿಂದ ಜನಿವಾರ ತೆಗೆಸಿ ಅವಹೇಳನ ಮಾಡಲಾಗಿದೆ. ಭಾವನೆಗಳಿಗೆ ಧಕ್ಕೆ ತರುವ ಕೆಲಸವಾಗಿದೆ. ಇದನ್ನು ಬ್ರಾಹ್ಮಣ ಸಮುದಾಯ ಖಂಡಿಸುತ್ತದೆ. ಕೂಡಲೇ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕೆಂದು ಒತ್ತಾ ಯಿಸಿದರು.

ಬ್ರಾಹ್ಮಣ ಸಮುದಾಯದ ತಾಲೂಕು ಸಂಘದ ನಿರ್ದೇಶಕ ನರಸಿಂಹನ್ ಮಾತನಾಡಿ, ಇಂತಹ ಹೀನ ಕೃತ್ಯವ್ಯಸಗಿದ ಅಧಿಕಾರಿಗಳಿಗೆ ಅಮಾನತು ಶಿಕ್ಷೆ ಸಾಲದು ಗಡಿಪಾರು ಮಾಡಬೇಕು. ಇನ್ನೊಮ್ಮೆ ಇಂತಹ ದುರ್ಘಟನೆಗಳು ಸಂಭವಿಸದಂತೆ ಸರ್ಕಾರ ಕ್ರಮವ ಹಿಸಬೇಕು ಎಂದು ಆಗ್ರಹಿಸಿದರು.

ವಾಗ್ದೇವಿ ವಿಪ್ರ ಮಹಿಳಾ ಸಂಘದ ಸದಸ್ಯೆ ಹಾಗೂ ವಕೀಲೆ ನಿರ್ಮಲಾ ಮಧುಸೂದನ್ ಮಾತನಾಡಿ, ಸಿಇಟಿ ಬರೆಯಲು ತೆರಳಿದ್ದ ಮಕ್ಕಳ ಜನಿವಾರ ತೆಗೆಸಿ ಕಸದ ಬುಟ್ಟಿಗೆ ಹಾಕಿರುವುದು ಬಹಳ ನೋವಿನ ಸಂಗತಿ. ಬ್ರಾಹ್ಮಣ ಜನಾಂಗದ ನಿಯಮ ಪ್ರಕಾರ ಜನಿವಾರವನ್ನು ಹಾಕಿದರೆ ಅವರಿಗೆ ಮರು ಹುಟ್ಟು ನಂಬಿಕೆ ಇದೆ. ಅಧಿಕಾರಿಗಳ ಕೃತ್ಯವನ್ನು ಖಂಡಿಸಲಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ತಾಲೂಕು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಉದಯಕುಮಾರ್, ಕಾರ್ಯದರ್ಶಿ ಚಂದ್ರಚೂಡ್, ಖಂಜಾಚಿ ವೆಂಕಟೇಶ್, ನಿರ್ದೇಶಕ ಸಂಕೇತ್, ಶ್ರೀಧರ್, ಪಶುಪತಿ, ಸುಬ್ರಮಣ್ಯ, ನರಸಿಂಹನ್, ಮಂಜುನಾಥ್, ಮಧುಸೂದನ್, ಸುದರ್ಶನ್ ಭಟ್, ನಾಗೇಂದ್ರ ದೀಕ್ಷಿತ್, ವಕೀಲ ರಾಧಾಕೃಷ್ಣ, ವಾಗ್ದೇವಿ ವಿಪ್ರ ಮಹಿಳಾ ಮಹಿಳಾ ಸಂಘದ ಅಧ್ಯಕ್ಷೆ ಮಲ್ಲಿಕಾ, ಸದಸ್ಯೆ ಸುಮಲತಾ, ನಳಿನಿ, ಆಶಾ, ಮಂಜುಳಾ, ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net