

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ರಾಹ್ಮಣ ಸಮುದಾಯದ ಬಡವರ ಬೆನ್ನಿಗೆ ನಿಂತಿರುವ ಶಾಸಕ ಎಸ್.ಎ. ರಾಮದಾಸ್, ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದಿಂದ ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣರಿಗೆ ಸಬ್ಸಿಡಿ ಸಹಿತ ಸಾಲ ಸೌಲಭ್ಯದ ಮಂಜೂರಾತಿ ಪತ್ರ ವಿತರಣೆ ಮಾಡಿದರು.
ಶ್ರೀರಾಂಪುರದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ನಗರ ಪಾಲಿಕೆ ವಾರ್ಡ್ ನಂ. 64 ಮತ್ತು 65 ವ್ಯಾಪ್ತಿಯ ಅದಾಲತ್ ಮತ್ತು ವಾರ್ಡ್ ಸಮಸ್ಯೆ ಪರಿಹಾರ ಮತ್ತು ಮಧುಮೇಹ ಮತ್ತು ನೇತ್ರ ತಪಾಸಣಾ ಉಚಿತ ಶಿಬಿರ ಹಮ್ಮಿಕೊಂಡು ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳಿಗೆ ಸರ್ಕಾರಿ ಸವಲತ್ತುಗಳ ವಿತರಣೆ ಮಾಡಿದರು.
ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣರು ಸ್ವಂತ ಉದ್ಯೋಗ ರೂಪಿಸಿಕೊಳ್ಳಲು ಇಡಬ್ಲುೃಎಸ್ ವರ್ಗದಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಾಯಧನ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿತ್ತು. ನಗರದ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 400 ಅರ್ಜಿಗಳು ಸಲ್ಲಿಕೆಯಾಗಿದ್ದು, ಮೊದಲ ಹಂತದಲ್ಲಿ 25 ಜನರಿಗೆ ಮಂಜೂರಾತಿ ಪತ್ರವನ್ನು ಶಾಸಕ ರಾಮದಾಸ್ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮ ಸಮುದಾಯದವರು ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡರೆ ಸ್ವಂತ ಶಕ್ತಿ ಮೇಲೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಕೃಷ್ಣರಾಜ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಲಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಇಡೀ ಕ್ಷೇತ್ರಕ್ಕೆ ಕಾವೇರಿ, ಕಬಿನಿ ನೀರು ದೊರೆಯಲಿದೆ. ಆ ಮೂಲಕ ಕ್ಷೇತ್ರ ಕೊಳವೆಬಾವಿ ಮುಕ್ತ ಕ್ಷೇತ್ರವಾಗಲಿದೆ. ಮುಂದಿನ ಒಂದು ತಿಂಗಳಲ್ಲಿ ಇಡೀ ಕ್ಷೇತ್ರದ ಎಲ್ಲ ರಸ್ತೆಗಳು ಸಂಪೂರ್ಣ ಡಾಂಬರೀಕರಣ ಆಗಲಿವೆ ಎಂದರು.