ಬ್ರಾಹ್ಮಣ ಸಮುದಾಯಕ್ಕೆ ಸೀಮಿತವಾಗಿ ಮಾತನಾಡಿಲ್ಲ

7 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಬ್ರಾಹ್ಮಣ ಸಮುದಾಯದ ವಿರುದ್ಧ ಅಲ್ಲ. ಅದು ಸ್ವಯಂ ರಾಜಕೀಯ ಹೇಳಿಕೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಜೆಡಿಎಸ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಕ್ಕೆ ತಿರುಗೇಟು ನೀಡಿದ್ದಾರೆ ಹೊರತು, ಒಂದು ಸಮುದಾಯಕ್ಕೆ ಸೀಮಿತವಾಗಿ ಮಾತನಾಡಿಲ್ಲ ಎಂದು ಜೆಡಿಎಸ್ ಮಹಾನಗರ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ದೇಶ ಪೂರ್ವಕ ಹೇಳಿಕೆ ನೀಡಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪಂಚರತ್ನ ಯಾತ್ರೆ ಜತೆಗೆ ದೇವೇಗೌಡ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಕುಮಾರಸ್ವಾಮಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ ಹೊರತು, ಒಂದು ಸಮುದಾಯಕ್ಕೆ ಅವಮಾನ ಮಾಡುವ ಉದ್ದೇಶ ಇಲ್ಲ ಎಂದು ಸ್ಪಷ್ಪಡಿಸಿದರು.
ನಾಲ್ಕು ಬಾರಿ ಸಂಸದರಾದ ಜೋಶಿ ಅವರಿಗೆ ಅಧಿಕಾರದ ಮದ ಏರಿ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು ಎಂಬ ಜ್ಞಾನ, ಸೌಜನ್ಯವೂ ಇಲ್ಲ. ಬಿಜೆಪಿ ನಾಯಕರು ಮತ ಬೇಕೆಂದಾಗ ಮಾತ್ರ ಹಿಂದು ಎನ್ನುತ್ತಾರೆ ಎಂಬುದು ಪಕ್ಷದ ನಾಯಕರು ಸೇರಿ ಜನರಿಗೂ ಅರ್ಥವಾಗಿದೆ. ಅಧಿಕಾರ ಎಂದಿಗೂ ಶಾಶ್ವತ ಅಲ್ಲ ಎಂಬುದನ್ನು ಅರಿತು ಮಾತನಾಡಬೇಕು ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ಮತ್ತೊಬ್ಬರನ್ನು ಹೀಯಾಳಿಸಿ ಮಾತನಾಡುವ ಪ್ರವೃತ್ತಿ ಇಲ್ಲ. ಆದರೆ ಎಚ್‌ಡಿಕೆ ಸೇರಿ ದೇವೇಗೌಡ ಕುಟುಂಬಸ್ಥರ ಬಗ್ಗೆ ಯಾವುದೇ ರಾಜಕಾರಣಿ ಹಗುರವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ. ದೇವೇಗೌಡ ಕುಟುಂಬದ ಬಗ್ಗೆ ಮಾತನಾಡಿವು ಜೋಶಿ ಅವರಿಗೆ ತಾಕತ್ತಿದ್ದರೆ, ವಿಧಾನಸಭೆ ಚುನಾವಣೆಯಲ್ಲಿ ಅಪ್ಪ ಮಕ್ಕಳು, ಅಣ್ಣ-ತಮ್ಮಂದಿರು ಸೇರಿ ಕುಟುಂಬಸ್ಥರಿಗೆ ಟಿಕೆಟ್ ನೀಡದೆ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net