

ಭದ್ರಾವತಿ: ಬ್ರಾಹ್ಮಣ ಸಮುದಾಯ, ಸಂಪ್ರದಾಯಗಳ ಮೇಲೆ ಹಲವು ರೀತಿಯ ದಬ್ಬಾಳಿಕೆ ಹಾಗೂ ಅವಹೇಳನಕಾರಿ ಮಾತುಗಳು ನಿರಂತರವಾಗಿ ಕೇಳಿ ಬರುತ್ತಿದ್ದು ಅಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಬೇಕೆಂದು ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ವಿವಿಧ ಬ್ರಾಹ್ಮಣ ಸಂಘಟನೆಗಳು ಒತ್ತಾಯಿಸಿವೆ.
ತಾಲೂಕು ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು, ಇತ್ತೀಚೆಗೆ ಮೈಸೂರಿನ ರಂಗಮಂದಿರದಲ್ಲಿ ಸಿದ್ದರಾಮಯ್ಯ 75 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಲೇಖಕ ಮಲ್ಲೇಶ್ ಎಂಬುವರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸಂಬಂಧ ಪಡದ ವಿಷಯ ಪ್ರಸ್ತಾಪಿಸುತ್ತ ಬ್ರಾಹ್ಮಣ ಸಮುದಾಯವನ್ನು ನಂಬಬೇಡಿ. ಇವರಿಂದ ದೇಶ ನಾಶವಾಗುತ್ತದೆ ಎಂದು ಹೇಳಿರುವುದು ನಿಜಕ್ಕೂ ಖಂಡನೀಯ. ಇದನ್ನು ಬ್ರಾಹ್ಮಣ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿದ್ದರಾಮಯ್ಯ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ದೂರಿದರು.
ಬ್ರಾಹ್ಮಣ ಸಮಾಜ ಶತಮಾನಗಳಿಂದ ಸಮಾಜದ ಎಲ್ಲಾ ವರ್ಗದವರೊಂದಿಗೆ ಸಹಬಾಳ್ವೆ ನಡೆಸುತ್ತ, ರಾಷ್ಟ್ರದ ಏಳಿಗೆಗೆ ತನ್ನದೆ ಆದ ಕೊಡುಗೆ ನೀಡಿದೆ. ಅಂತಹ ಬ್ರಾಹ್ಮಣ ಸಮಾಜದ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಲೇಖಕ ಹಾಗೂ ಆ ಕಾರ್ಯಕ್ರಮದ ಆಯೋಜಕರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.