

ಸೊರಬ: ಶ್ರೀ ನಾರಾಯಣ ಗುರುಗಳ ಸತತ ಪರಿಶ್ರಮದಿಂದಾಗಿ ಇಂದು ಆರ್ಯ ಈಡಿಗ ಸಮಾಜ ಪರಿವರ್ತನೆಗೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ಶನಿವಾರ ರಂಗಮಂದಿರದಲ್ಲಿ ತಾಲೂಕು ಆರ್ಯ ಈಡಿಗ ಸಮಾಜ, ವಿವಿಧ ಸಂಘಟನೆಗಳು ಹಾಗೂ ತಾಲೂಕು ಆಡಳಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ನಾವು ಹುಟ್ಟಿರುವ ಸಮಾಜವನ್ನು ಪ್ರೀತಿಸುವ ಜತೆಗೆ, ಇತರ ಸಮಾಜದವರು ನಮ್ಮ ಮೇಲೆ ವಿಶ್ವಾಸ ಮೂಡುವಂತೆ ನಾವು ನಡೆದುಕೊಳ್ಳಬೇಕು. ಕರಾವಳಿ ಭಾಗದಲ್ಲಿ ಈಚಲು ಮರದಲ್ಲಿ ನೀರಾ ತೆಗೆಯುವ ವೃತ್ತಿಯಿಂದ ಆರಂಭವಾದ ಕುಲಕಸುಬು ಮಲೆನಾಡಿನಲ್ಲಿ ಕೃಷಿ ಕುಟುಂಬಗಳಾಗಿ ನೆಲೆ ಕಂಡುಕೊಂಡಿವೆ. ಈಡಿಗ ಸಮುದಾಯ ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದುತ್ತ ಪ್ರಮುಖ ಸಮುದಾಯವಾಗಿ ಗುರುತಿಸಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಡಾ.ರಾಜ್‌ಕುಮಾರ್, ಕಾಗೋಡು ತಿಮ್ಮಪ್ಪ ಅವರಂತಹ ನಾಯಕರು ಈಡಿಗ ಸಮಾಜದಲ್ಲಿ ಕಳಶಪ್ರಾಯವಾಗಿದ್ದಾರೆ ಎಂದು ತಿಳಿಸಿದರು.
ಬೆತ್ತಲೆ ಸೇವೆಯಂತಹ ಅನಿಷ್ಟ ಪದ್ಧತಿ ಜಾರಿಯಲ್ಲಿದ್ದ ತಾಲೂಕಿನಲ್ಲಿ ಶಿಕ್ಷಣ ಹಾಗೂ ಹೋರಾಟದಿಂದ ಬೆತ್ತಲೆಸೇವೆ ನಿಷೇಧಗೊಂಡಿದೆ. ಜನರ ಮನಸ್ಸಿನ ಬದಲಾವಣೆ ಮೇಲೆ ಪರಿಣಾಮ ಬೀರುವಂತಹ ಪ್ರಯತ್ನಗಳು ನಡೆದರೆ ಸಮಾಜವೂ ಬದಲಾವಣೆಗೊಳ್ಳುತ್ತದೆ ಎನ್ನುವುದಕ್ಕೆ ಚಂದ್ರಗುತ್ತಿ ಬೆತ್ತಲೆ ಸೇವೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು, ಬಸವಾದಿ ಶರಣರ ಚಿಂತನೆಗಳು ಸಾರ್ವಕಾಲಿಕ ಸತ್ಯವಾಗಿ ಉಳಿಯುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಹೊಸಪೇಟೆ ಬಡಾವಣೆಯ ಶ್ರೀ ನಾರಾಯಣ ಗುರು ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೆರವಣಿಗೆ ನಡೆಸಲಾಯಿತು.