

ಕಳಸ: ನಾರಾಯಣ ಗುರುಗಳ ಆದರ್ಶ, ತತ್ವಗಳು ಬಿಲ್ಲವರಿಗೆ ಮಾತ್ರವಲ್ಲದೆ ಸರ್ವ ಸಮಾಜಕ್ಕೂ ಅನ್ವಯವಾಗುತ್ತವೆ ಎಂದು ಕಳಸ ತಾಲೂಕು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ ಹೇಳಿದರು.
ಕಳಸದ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದಿಂದ ಭಾನುವಾರ ಆಯೋಜಿಸಿದ್ದ ನಾರಾಯಣಗುರು ಜಯಂತಿಯಲ್ಲಿ ಮಾತನಾಡಿ, ಬಿಲ್ಲವರು ಒಗ್ಗಟ್ಟಾಗಿ ಸಂಘವನ್ನು ಬೆಳೆಸಬೇಕು. ಇತರ ಸಮಾಜಗಳಿಗೂ ನೆರವು ನೀಡಿ ಗುರುಗಳ ತತ್ವಗಳನ್ನು ಪಾಲಿಸಬೇಕು ಎಂದು ಹೇಳಿದರು.
ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಾಸು ಪೂಜಾರಿ ಮಾತನಾಡಿ, ಗುರುಗಳ ಸಂದೇಶ ಸಾರುವ ರಥಯಾತ್ರೆ ಮೂರು ದಿನಗಳಿಂದ ಸಂಚರಿಸುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಸಮಾಜದವರು ರಥವನ್ನು ಸ್ವಾಗತಿಸಿ ಪೂಜೆ ಸಲ್ಲಿಸಿದರು. ಬಳಿಕ ರಥವನ್ನು ಕಳಸ ಮುಖ್ಯ ರಸ್ಥೆಯಲ್ಲಿ ಮೆರವಣಿಗೆ ನಡೆಸಿ ಬೀಳ್ಕೊಡಲಾಯಿತು. ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಸದಸ್ಯ ಸಂಜೀವ, ಮುಖಂಡರಾದ ಎಂ.ಎ.ಶೇಷಗಿರಿ, ಶ್ರೀನಿವಾಸ, ಚಂದ್ರಶೇಖರ, ರವಿ ಸುವರ್ಣ, ರಾಮಚಂದ್ರ ಇದ್ದರು.