ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಜನಸಾಗರ, ಒಂದು ವಾರ ಸಾಂಸ್ಕೃತಿಕ ರಂಗ ವೈಭವ

20210323_140849
Published on

ದೊಡ್ಡಬಳ್ಳಾಪುರ ಗ್ರಾಮಾಂತರ: ಮಧುರೆ ಹೋಬಳಿ ಕನಸವಾಡಿಯ ಇತಿಹಾಸ ಪ್ರಸಿದ್ಧ ಶನಿಮಹಾತ್ಮ ಸನ್ನಿಧಿಯಲ್ಲಿ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ವಿವಿಧ ಜಿಲ್ಲೆಗಳು, ಅಕ್ಕಪಕ್ಕದ ತಾಲೂಕುಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ದೇವಸ್ಥಾನ ಆಡಳಿತ ಮಂಡಳಿ ಮಧ್ಯಾಹ್ನ 1.45ಕ್ಕೆ ಬ್ರಹ್ಮರಥೋತ್ಸವ ನೆರವೇರಿಸಿತು. ಬಂದಿದ್ದ ಭಕ್ತರು ತೇರಿಗೆ ದವನ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಡೊಳ್ಳು ಕುಣಿತ, ಕೀಲುಕುದುರೆ ಕುಣಿತ, ಕಂಸಾಳೆ ನೃತ್ಯ ಪ್ರದರ್ಶನಗಳು ನೋಡುಗರ ಕಣ್ಮನ ಸೆಳೆದವು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಮಧುರೆ ಶನಿಮಹಾತ್ಮದೇವಾಲಯ ಧಾರ್ಮಿಕ ಕ್ಷೇತ್ರವಾಗಿ ಪ್ರಖ್ಯಾತವಾಗಿದೆ. 80 ವರ್ಷಗಳ ಹಿಂದೆ ಸ್ಥಾಪಿತವಾದ ದೇವಸ್ಥಾನ ದಿನೇದಿನೆ ಅಭಿವೃದ್ಧಿಗೊಂಡು ಈಗ ಸುಸಜ್ಜಿತ ದೇಗುಲ ಹೊಂದಿದೆ. ಸುಂದರವಾದ ರಾಜಗೋಪುರ, ಕಲ್ಲು ಮಂಟಪದ ಆವರಣವಿರುವ ಗರ್ಭಗುಡಿಯಲ್ಲಿ ಮೂಲ ವಿಗ್ರಹದೊಂದಿಗೆ ಶನಿಮಹಾತ್ಮ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯ ಮುಂಭಾಗದ ಮಂಟಪದ ಉತ್ಸವ ಮೂರ್ತಿಗೆ ಪ್ರತಿದಿನ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ದೇಗುಲ ಆವರಣದಲ್ಲಿ ಗಣಪತಿ ದೇವಾಲಯವಿದೆ. ಇತ್ತೀಚೆಗೆ ಜ್ಯೇಷ್ಠಾದೇವಿ ದೇವಾಲಯ ನಿರ್ಮಿಸಲಾಗಿದೆ. ಶನಿಮಹಾತ್ಮ ಹಾಗೂ ಜ್ಯೇಷ್ಠಾದೇವಿ ದೇಗುಲಗಳು ಒಟ್ಟಾಗಿರುವುದು ತುಂಬ ಅಪರೂಪವಾಗಿದೆ.

ವಾರಪೂರ್ತಿ ಸಾಂಸ್ಕೃತಿಕ ರಂಗ ವೈಭವ: ಬ್ರಹ್ಮರಥೋತ್ಸವದ ಬಳಿಕ ರಾತ್ರಿ 9ಕ್ಕೆ ಧೂಳೋತ್ಸವ, ದಿವ್ಯಾಲಂಕೃತ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿತ್ತು. ನಂತರ ಜೂನಿಯರ್ ರಾಜ್‌ಕುಮಾರ್ ತಂಡ ಸಂಗೀತ ಸಂಜೆ ಕಾರ್ಯಕ್ರಮ ಪ್ರಸ್ತುತಪಡಿಸಿತು. ಮಾ.24 ರ ರಾತ್ರಿ 9 ಗಂಟೆಗೆ ಶನಿಮಹಾತ್ಮ ಮತ್ತು ಆಂಜನೇಯಸ್ವಾಮಿ ಬೆಳ್ಳಿರಥೋತ್ಸವ ಹಾಗೂ ಸಂಗಾತಿ ಸಂಜೆ ನಡೆಯಲಿದೆ.

25ರ ರಾತ್ರಿ ಸ್ವಾಮಿಗೆ ಬೆಳ್ಳಿ ಪಲ್ಲಕ್ಕಿಯ ಉತ್ಸವ, ಕೀಲುಕುದುರೆ ಉತ್ಸವ ನಡೆಯಲಿದೆ. 26ರ ರಾತ್ರಿ 9ಕ್ಕೆ ಅಶ್ವವಾಹನೋತ್ಸವ, ಸಂಗೀತ ಸಂಜೆ ಮತ್ತು ರಾತ್ರಿ 12ಕ್ಕೆ ವಿಶೇಷ ಮದ್ದಿನ ಪ್ರದರ್ಶನ ನಡೆಯಲಿದೆ. ಮಾ. 27ರ ರಾತ್ರಿ 9ಕ್ಕೆ ಕಾಕ ವಾಹನೋತ್ಸವ ಮತ್ತು ಸಂಗೀತೋತ್ಸವ ನಡೆಯಲಿದೆ. ಮಾ.28ರ ಬೆಳಗ್ಗೆ 9ಕ್ಕೆ ಚಂದ್ರ ಮಂಡಲೋತ್ಸವ, ಕೀಲುಕುದುರೆ ಕಾರ್ಯಕ್ರಮ, ಮಾ.29ರವರೆಗೆ ದಿನನಿತ್ಯ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರತಿದಿನ ಶನಿ ಪ್ರಭಾವ, ರಾಜಾ ಸತ್ಯವ್ರತ, ಕುರುಕ್ಷೇತ್ರ ಸೇರಿ ಹಲವು ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ದೇವಾಲಯ ಸಮಿತಿಯು ಸರ್ಕಾರದ ನಿಯಮದಂತೆ ಕರೊನಾ ಮುಂಜಾಗ್ರತೆ ಕೈಗೊಂಡಿದೆ. ಈ ಬಾರಿ ಬ್ರಹ್ಮರಥೋತ್ಸವಕ್ಕೆ ಹೆಚ್ಚಿನ ಭಕ್ತರು ಸೇರಿದ್ದು ಸಂತಸ ತಂದಿದೆ. ಕೆ.ವಿ.ಪ್ರಕಾಶ್, ಧರ್ಮಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net