

ಮೈಸೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸರಸ್ವತೀಪುರ ಶಾಖೆ ವತಿಯಿಂದ ಸರಸ್ವತೀಪುರಂನ ಸೋಮಾನಿ ಕಾಲೇಜಿನಲ್ಲಿ ಗುರುವಾರ ವಿಶ್ವವಿದ್ಯಾಲಯದ 88ನೇ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಕಾರ್ಯಕ್ರಮ ನಡೆಯಿತು.
ಆಧ್ಯಾತ್ಮಿಕ ಚಿಂತಕ ಬ್ರಹ್ಮಕುಮಾರ ರಂಗನಾಥ್ ಮಾತನಾಡಿ, ಇತಿಹಾಸದ ಪುಟಗಳಲ್ಲಿ ತಮ್ಮ ಜೀವನ ಸಾಧನೆಯನ್ನು ಸುವರ್ಣಾಕ್ಷರದಲ್ಲಿ ಬರೆದ ಅನೇಕ ಪುಣ್ಯಾತ್ಮರು ಇದ್ದಾರೆ. ಅವರೆಲ್ಲರಿಗೂ ನಾವು ಅತ್ಯಂತ ಕೃತಜ್ಞರಾಗಿರಬೇಕು. ಏಕೆಂದರೆ ನಾವು ಇಲ್ಲಿ ಕುಳಿತು ದೇವರ ಸೇವೆ ನಡೆಸುತ್ತಿರುವುದಕ್ಕೆ ಹಲವು ಪುಣ್ಯಾತ್ಮರ ಕೊಡುಗೆ ಇದೆ. ದೇಶದಲ್ಲಿ ಅನೇಕ ಧಾರ್ಮಿಕ ಸಂಘಗಳು ಬಹಳಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುತ್ತಿವೆ. ಅದರಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಒಂದು ಪ್ರಮುಖ ಅಂಗ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ 1936ರಲ್ಲಿ ಪ್ರಾರಂಭವಾಯಿತು. ಸಂಸ್ಥೆಯನ್ನು ಪ್ರಜಾಪಿತ ಬ್ರಹ್ಮ ಸ್ಥಾಪಿಸಿ ದರು. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಪ್ರಜಾಪಿತ ಬ್ರಹ್ಮ ಅವರು ಶಿಕ್ಷಕರ ಮಗನಾಗಿ ಹುಟ್ಟಿ ಬಹಳದೊಡ್ಡ ವ್ಯಾಪಾರಿಯಾಗಿ ಬೆಳೆದರು. ಕೇವಲ ವ್ಯವಹಾರದಲ್ಲಿ ಮುಂದುವರೆದರೆ ಸಾಲದು ಆಧ್ಯಾತ್ಮಿಕವಾಗಿ ಮುಂದುವರೆಯಬೇಕು, ಭಾರತೀಯರಿಗೆ ವಿಶೇಷವಾದ ಆಧ್ಯಾತ್ಮಿಕ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಪ್ರಾರಂಭಿಸಿದರು. ಅವರನ್ನು ಇಂದು ನಾವು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಸಚಿವ ಸಿ.ಎಚ್. ವಿಜಯಶಂಕರ್, ಮೈಸೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಆರ್. ಮಂಜುನಾಥ್, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೈಸೂರು ವಲಯದ ನಿರ್ದೇಶಕಿ ರಾಜಯೋಗಿ ಬಿ.ಕೆ. ಲಕ್ಷ್ಮೀ, ಯೋಗಪಟು ಖುಷಿ ಹೇಮಚಂದ್ರ, ರಾಜಯೋಗಿನಿ ಶಾರದ ಹಾಗೂ ಇತರರು ಇದ್ದರು.