

ಮಧುಗಿರಿ : ಕೃಷಿ ಉತ್ಪನ್ನ ಮಾರುಕಟ್ಟೆಗಳು ರೈತರು, ಕೃಷಿಕರು ಹಾಗೂ ಗ್ರಾಹಕರ ಹಿತ ಕಾಪಾಡುವ ಮೂಲಕ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಬ್ಯಾಲ್ಯದಲ್ಲಿ ಪ್ರಾರಂಭವಾಗಿರುವ ಉಪ ಮಾರುಕಟ್ಟೆ ಈ ಭಾಗದ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲಕರವಾಗಲಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
2014-15ನೇ ಸಾಲಿನ ಡಬ್ಲ್ಯೂಐಎ್ ಹೆಚ್ಚುವರಿ ಯೋಜನೆಯಡಿ ಮಧುಗಿರಿ ತಾಲೂಕಿನ ಬ್ಯಾಲ್ಯ ಗ್ರಾಮದ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಶುಕ್ರವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಿರ್ಮಿಸಲಾದ ಮುಚ್ಚು ಹರಾಜು ಕಟ್ಟೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣ ಪ್ರದೇಶಕ್ಕೆ ಸೀಮಿತವಾಗಿದ್ದ ಮಾರುಕಟ್ಟೆಗಳು ಜನ ಸಾಮಾನ್ಯರ ಮನೆ ಬಾಗಿಲಿಗೆ ಬಂದು ರೈತರಿಗೆ, ಗ್ರಾಹಕರಿಗೆ ಸಂಬಂಧ ಸೇತುವೆಯಾಗಿ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಉಪ ಮಾರುಕಟ್ಟೆಯಲ್ಲಿ ವಾರಕ್ಕೊಮ್ಮೆಸಂತೆ ಸೇರಿ ಇನ್ನಿತರ ವ್ಯಾಪಾರ -ವಹಿವಾಟು ಚಟುವಟಿಕೆಗಳು ನಡೆದು ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಎಂದು ಶುಭ ಕೋರಿದರು.
30 ವರ್ಷಗಳಿಂದ ಪುರವರ ಹೋಬಳಿ ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು, ನಾನು ಕೂಡ ನನ್ನ ಕೈಲಾದ ಮಟ್ಟಿಗೆ ಕ್ಷೇತ್ರದ ಜನತೆಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಜಯಮಂಗಲಿ ನದಿಯಿಂದ ದೊಡ್ಡಹೊಸಹಳ್ಳಿ ಕೆರೆಗೆ ನೀರು ಹರಿಸುವ ಕಾಲುವೆಗೆ ಸರ್ಕಾರದಿಂದ ಅನುಮೋದನೆ ಪಡೆಯುವುದಾಗಿ ಭರವಸೆ ನೀಡಿದರು.
ಎಪಿಎಂಸಿ ಉಪಾಧ್ಯಕ್ಷ ರಾಜ್‌ಕುಮಾರ್ ಮಾತನಾಡಿ, ನಮ್ಮ ಭಾಗದ ರೈತರಿಗಾಗಿ ಉಪ ಮಾರುಕಟ್ಟೆ ತೆರೆದಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಮಾಜಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ, ಎಪಿಎಂಸಿ ಕಾರ್ಯದರ್ಶಿ ಆಶಾ, ನಿರ್ದೇಶಕ ಬಸವರಾಜು, ಬಗರ್ ಹುಕುಂ ಸದಸ್ಯ ನಂಜೇಗೌಡ, ಕೊಡಗದಾಲ ಗ್ರಾಪಂ ಅಧ್ಯಕ್ಷೆ ಶೈಲಜಾ, ಬ್ಯಾಲ್ಯ ವಿಎಸ್‌ಎಸ್‌ಎನ್ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ನಾಗರಾಜು, ತಿಪ್ಪಯ್ಯ ಇದ್ದರು.
ಎತ್ತಿನಹೊಳೆಗೆ ಪ್ರಥಮ ಆದ್ಯತೆ ; ಎತ್ತಿನಹೊಳೆ ಯೋಜನೆ ಕಾಮಗಾರಿಗೆ 21 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಸರ್ಕಾರ ಮುಂದಿನ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿಟ್ಟು, ಯೋಜನೆ ತ್ವರಿತವಾಗಿ ಮುಗಿಸಬೇಕು. 8.5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದು, ಕೊರಟಗೆರೆ ತಾಲೂಕಿನಲ್ಲಿ 105 ಕೆರೆಗಳಿಗೆ ನೀರು ಹರಿಯಲಿದೆ. ನೀರಾವರಿ ಯೋಜನೆಗಳು ಕಾರ್ಯಗತವಾದರೆ ರೈತರೇ ಸರ್ಕಾರಕ್ಕೆ ಹಣ ಒದಗಿಸುವರು. 18 ಕೋಟಿ ರೂಪಾಯಿ ವೆಚ್ಚದಲ್ಲಿ ಐ.ಡಿ.ಹಳ್ಳಿ ಕ್ರಾಸ್‌ನಿಂದ ಬ್ಯಾಲ್ಯದವರೆಗೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಬ್ಯಾಲ್ಯದಿಂದ-ವಡ್ಡರಹಟ್ಟಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಜತೆಗೆ ಹನುಮಂತಪುರ ರಸ್ತೆ ಅಭಿವೃದ್ಧಿಗೊಳಿಸೋಣ ಎಂದು ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.