ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಆದೇಶ

ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಆದೇಶ
Published on

ಹಾಸನ: ಬಟ್ಟೆ ಬ್ಯಾನರ್ ಮತ್ತು ಬಟ್ಟೆ ಬಂಟಿಂಗ್ಸ್‌ಗಳನ್ನು ಅಳವಡಿಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಅನುಮತಿ ಪಡೆದು, ಇಲಾಖೆಯು ವಿಧಿಸುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಯಾವುದೇ ಪಕ್ಷ, ಧರ್ಮ, ಮತ, ಜಾತಿ ಅಥವಾ ವ್ಯಕ್ತಿಯ ತೇಜೋವಧೆ ಆಗದಂತೆ ಅಳವಡಿಸಬೇಕು ಎಂದು ಜಿಲ್ಲಾ ದಂಡಾಧಿಕಾರಿ ಎಂ.ಎಸ್. ಅರ್ಚನಾ ಬುಧವಾರ ಆದೇಶ ಹೊರಡಿಸಿದ್ದಾರೆ.


ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಅಳವಡಿಸಬೇಕು, ಯಾವುದೇ ಸಂದರ್ಭದಲ್ಲಿ ಯಾವುದೇ ತಿಳಿವಳಿಕೆ ನೀಡದೆ ಅನುಮತಿ ರದ್ದುಪಡಿಸುವ ಅಥವಾ ಹಿಂಪಡೆಯುವ ಅಧಿಕಾರವನ್ನು ಸ್ಥಳೀಯ ಸಂಸ್ಥೆ ಹೊಂದಿರುತ್ತದೆ. ಬ್ಯಾನರ್ ಮತ್ತು ಬಟ್ಟೆ ಬಂಟಿಂಗ್ಸ್‌ಗಳನ್ನು ಅಳವಡಿಸುವ ಹಾಗೂ ತೆಗೆಸುವ ಸಂದರ್ಭದಲ್ಲಿ ಅನುಮತಿ ಪಡೆದವರು ಮುಂದೆ ನಿಂತು ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಕ್ರಮಕೈಗೊಳ್ಳುವುದು ಹಾಗೂ ಏನಾದರೂ ಅಹಿತಕರ ಘಟನೆಗಳು ನಡೆದಿದ್ದಲ್ಲಿ ಅನುಮತಿ ಪಡೆದಿರುವವರನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ಆದೇಶ ಪತ್ರದಲ್ಲಿ ಎಚ್ಚರಿಸಿದ್ದಾರೆ.


ಯಾವುದೇ ರಸ್ತೆಗಳಿಗೆ ಅಡ್ಡಲಾಗಿ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಕಟ್ಟಬಾರದು. ದೊಡ್ಡ ಮರಗಳ ಮೇಲೆ ಹಾಗೂ ಹೈಮಾಸ್ಟ್ ವಿದ್ಯುತ್ ದೀಪದ ಕಂಬಗಳ ಮೇಲೆ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಅಳವಡಿಸಬಾರದು. ಅನುಮತಿ ಪಡೆದ ಸ್ಥಳದಲ್ಲಿ ಅಳವಡಿಸಿದ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಅನುಮತಿ ಪಡೆದಿರುವವರೇ ಕಡ್ಡಾಯವಾಗಿ ಸಂರಕ್ಷಿಸಿಕೊಳ್ಳಲು ಸ್ವಯಂಸೇವಕರು ಅಥವಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.


ಅನುಮತಿ ಅವಧಿ ಮುಗಿದ ನಂತರ ಅಳವಡಿಸಿರುವ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಅನುಮತಿ ಪಡೆದಿರುವವರೇ ತೆರವುಗೊಳಿಸಬೇಕು. ಅನುಮತಿ ಪಡೆಯುವ ಸಂದರ್ಭದಲ್ಲಿ ತಮ್ಮ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಪೊಲೀಸ್ ಠಾಣೆಗೆ ಹಾಗೂ ಸ್ಥಳೀಯ ಸಂಸ್ಥೆಗೆ ನೀಡಬೇಕು. ಒಂದು ವೇಳೆ ನಿಗದಿತ ದಿನಾಂಕದಂದು ತೆರವುಗೊಳಿಸದಿದ್ದಲ್ಲಿ ಸ್ಥಳೀಯ ಸಂಸ್ಥೆಗಳಿಂದ ತೆರವುಗೊಳಿಸಿ ಸಂಬಂಧಿಸಿದ ವೆಚ್ಚವನ್ನು ಹಾಗೂ ದಂಡದ ಮೊತ್ತವನ್ನು ಅನುಮತಿ ಪಡೆದಿರುವವರಿಂದ ವಸೂಲು ಮಾಡಲಾಗುವುದು ಎಂದು ತಿಳಿಸಿದ್ದಾರೆ.


ಯಾವುದೇ ಸರ್ಕಾರಿ/ಅರೆ ಸರ್ಕಾರಿ ಕಚೇರಿಗಳ ಕಾಂಪೌಂಡ್/ಗೋಡೆ ಮೇಲೆ ಗೋಡೆಬರಹ ಬರೆಯುವುದು ಹಾಗೂ ಬಿತ್ತಿ ಚಿತ್ರಗಳನ್ನು ಅಂಟಿಸಬಾರದು. ಖಾಸಗಿ ವ್ಯಕ್ತಿಗಳ ಕಾಂಪೌಂಡ್/ಗೋಡೆ ಮೇಲೆ ಗೋಡೆ ಬರಹ ಹಾಗೂ ಬಿತ್ತಿ ಚಿತ್ರಗಳನ್ನು ಅಂಟಿಸುವವರು ಸಂಬಂಧಪಟ್ಟ ಮಾಲೀಕರ ಒಪ್ಪಿಗೆ ಮೇರೆಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯತಕ್ಕದ್ದು ಎಂದು ಸೂಚಿಸಲಾಗಿದೆ.
ಮೇಲ್ಕಂಡ ಷರತ್ತುಗಳು ಉಲ್ಲಂಘನೆಯಾಗಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ದಂಡ ವಿಧಿಸಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net