ಬ್ಯಾಟರಿ ಸ್ಫೋಟಿಸಿ ಸ್ಕೂಟರ್ ಭಸ್ಮ

02-kolar-4
ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮವಾಗಿರುವುದು.
Published on

ಕೋಲಾರ: ನಗರದ ಧರ್ಮರಾಯನಗರದ ೨ನೇ ಅಡ್ಡರಸ್ತೆಯಲ್ಲಿ ತಾಂತ್ರಿಕ ದೋಷದಿಂದ ಬ್ಯಾಟರಿ ಸ್ಫೋಟಿಸಿ ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮವಾಗಿದೆ. ಪತ್ರಿಕೆ ವಿತರಕ ಹರೀಶ್‌ಗೆ ಸೇರಿದ ವಾಹನ ಇದಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಮುಂಜಾನೆ ಪತ್ರಿಕೆ ವಿತರಣೆ ಮಾಡಿ ಮನೆ ಬಳಿ ಬಂದಾಗ ಸ್ಕೂಟರ್ ನಿಂತು ಹೋಗಿದೆ. ಕೂಡಲೇ ಸ್ಟಾರ್ಟ್ ಮಾಡಲು ಯತ್ನಿಸಿದ್ದು, ಬ್ಯಾಟರಿಯಿಂದ ಹೊಗೆ ಕಾಣಿಸಿಕೊಂಡಿದೆ. ಇದರಿಂದ ವಿಚಲಿತರಾದ ಹರೀಶ್ ಕೆಳಗಿಳಿದು ಬ್ಯಾಟರಿಯನ್ನು ವಾಹನದಿಂದ ಹೊರತೆಗೆದು ರಸ್ತೆ ಮೇಲೆ ಇಟ್ಟಿದ್ದಾರೆ. ಆಗ ಬ್ಯಾಟರಿಯಿಂದ ಹೊಗೆ ಜತೆ ಬೆಂಕಿ ಕಾಣಿಸಿಕೊಂಡಿದೆ. ಆಗ ಅವರು ದೂರ ಓಡಿಹೋಗಿದ್ದು, ಕ್ಷಣಾರ್ಧದಲ್ಲಿ ಸ್ಫೋಟಿಸಿದೆ. ಆಗ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡು ದಗದಗನೆ ಹೊತ್ತಿ ಉರಿದಿದೆ. ನೋಡನೋಡುತ್ತಲೇ ಸ್ಕೂತರ್ ಸುಟ್ಟು ಕರಕಲಾಗಿದೆ.
ಪೆಟ್ರೋಲ್ ಬೆಲೆ ಹೆಚ್ಚಾದ್ದರಿಂದ ಹರೀಶ್ ಕಳೆದ ವರ್ಷ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದರು. ಅದೇ ಬೈಕ್‌ನಲ್ಲಿ ವರ್ಷದಿಂದ ಪತ್ರಿಕೆ ವಿತರಿಸುತ್ತಿದ್ದರು. ಪತ್ರಿಕೆ ವಿತರಣೆ ಮಾಡಿ ಜೀವನ ಸಾಗಿಸುತ್ತಿರುವ ಅವರಿಗೆ ವಾಹನ ಕಳೆದುಕೊಂಡು ಮರಗುವಂತಾಗಿದೆ.

ಒಕೆನೋವಾ ಕಂಪೆನಿಯ ವಾಹನ ಇದಾಗಿದ್ದು, ೧ಲಕ್ಷ ೮ಸಾವಿರ ರೂ.ಗೆ ಖರೀದಿಸಿದ್ದು ಕೋಲಾರದಲ್ಲಿ ಈ ಹಿಂದೆ ಇದ್ದ ಶೋರೂಂ ಸಹ ಈಗ ಬಾಗಿಲು ಮುಚ್ಚಿದೆ. ಕಂಪೆನಿಯವರನ್ನು ಸಂಪರ್ಕಿಸಿದಾಗ ಶೇ.೫೦ರಷ್ಟು ಹಣ ಕೊಡುವ ಭರವಸೆ ಕೊಟ್ಟಿದ್ದಾರೆ. ಪೂರ್ತಿ ಹಣ ಪಾವತಿಸಿದರೆ ಬೇರೊಂದು ಬೈಕ್ ಖರೀದಿಸಬಹುದು.- ಹರೀಶ್, ಪತ್ರಿಕೆ ವಿತರಕ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net