

ಕುಮಟಾ: ಪಟ್ಟಣದ ಕೋರ್ಟ್ ರಸ್ತೆಯ ಎಸ್ಬಿಐ ಕಟ್ಟಡದಲ್ಲಿರುವ ತಾಲೂಕು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ, ಇರ್ನÌರ್ ವ್ಯವಸ್ಥೆ ಕೆಟ್ಟು 2 ವರ್ಷವಾದರೂ ದುರಸ್ತಿಯಿಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ತಾಲೂಕಿನಲ್ಲಿ ಪ್ರತಿನಿತ್ಯ ಮನೆ, ನಿವೇಶನ, ಕೃಷಿ ಭೂಮಿ, ಮದುವೆ ಸಹಿತ ಬಹಳಷ್ಟು ಕೆಲಸಕ್ಕಾಗಿ ಉಪನೋಂದಣಾಧಿಕಾರಿ ಕಚೇರಿಗೆ ಜನ ಬರುತ್ತಾರೆ. ಆದರೆ, ವಿದ್ಯುತ್ ವ್ಯತ್ಯಯವಾದಾಗಲೆಲ್ಲ ಬ್ಯಾಕ್ಅಪ್ ಇಲ್ಲದೆ ಕಂಪ್ಯೂಟರ್ ಕೆಲವೇ ನಿಮಿಷದಲ್ಲಿ ಸ್ಥಗಿತಗೊಳ್ಳುತ್ತದೆ.
ಸರತಿಯಲ್ಲಿ ನಿಂತ ಜನರು ವಿದ್ಯುತ್ ಬರುವವರೆಗೂ ಕಾಯಬೇಕು. ಒಂದೆಡೆ ಬ್ಯಾಕ್ಅಪ್ ಸಮಸ್ಯೆ ಕಾಡುತ್ತಿದ್ದರೆ ಇನ್ನೊಂದೆಡೆ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಪರದಾಡಬೇಕಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಾಮಾಜಿಕ ಕಾರ್ಯಕರ್ತ ಗಜು ನಾಯ್ಕ ಅಳ್ವೇಕೋಡಿ, ಉಪನೋಂದಣಾಧಿಕಾರಿ ಕಚೇರಿಯ ಬ್ಯಾಟರಿ-ಇರ್ನÌರ್ ಹಾಗೂ ಸರ್ವರ್ ಸಮಸ್ಯೆಯಿಂದ ಜನ ರೋಸಿಹೋಗುವಂತಾಗಿದೆ. ಎರಡು ವರ್ಷವಾದರೂ ದುರಸ್ತಿ ಮಾಡಿಸದೇ ಇರುವುದು ವ್ಯವಸ್ಥೆಗೆ ಹಿಡಿದ ಕನ್ನಡಿ. ಈ ಪರಿಸ್ಥಿತಿ ಕೇವಲ ಕುಮಟಾದಲ್ಲಿ ಮಾತ್ರವಲ್ಲ ಜಿಲ್ಲೆಯ ಇತರ ಕೆಲ ತಾಲೂಕುಗಳಲ್ಲೂ ಇದೆ ಎಂದಿದ್ದಾರೆ. ಕಚೇರಿಗೆ ತಾಂತ್ರಿಕ ಸೌಲಭ್ಯ ಒದಗಿಸಿದ್ದ ಕಂಪನಿಯ ಟೆಂಡರ್ ಅವಧಿ ಮುಗಿದಿದೆ. ಹೀಗಾಗಿ ಜಿಲ್ಲೆಯ ಎಲ್ಲ ಕಡೆ ಇದೇ ಸಮಸ್ಯೆ ಇದೆ. ಹೊಸ ಟೆಂಡರ್ ಬಳಿಕ ಸಮಸ್ಯೆ ಬಗೆಹರಿಸಬಹುದು ಎಂಬ ಮಾಹಿತಿ ಇದೆ.
ನಮ್ಮಲ್ಲಿ ತಾತ್ಕಾಲಿಕವಾಗಿ ಒಂದು ಬ್ಯಾಟರಿ ಅಳವಡಿಸಿದ್ದು, ಕೇವಲ 15 ನಿಮಿಷ ಮಾತ್ರ ಒಂದು ಕಂಪ್ಯೂಟರ್ ಬಳಸಬಹುದಾಗಿದೆ. ಒಂದು ಲೈಟ್ ಕೂಡ ಉರಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ವ್ಯತ್ಯಯವಾದಾಗ ಸಮಸ್ಯೆಯಾಗುತ್ತಿದೆ. | ಶಿವಾನಂದ, ಉಪ ನೋಂದಣಾಧಿಕಾರಿ ಕಚೇರಿ ನೌಕರ