ಬ್ಯಾಂಕ್‌ಗಳ ವಿರುದ್ಧ ರೈತರ ಪ್ರತಿಭಟನೆ

Published on

ಚಾಮರಾಜನಗರ: ಸಾಲ ವಸೂಲಾತಿ ಸಂದರ್ಭದಲ್ಲಿ ರೈತರಿಗೆ ಬ್ಯಾಂಕ್‌ಗಳು ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ವಿರಕ್ತ ಮಠದ ಪಕ್ಕದಲ್ಲಿರುವ ಲೀಡ್ ಬ್ಯಾಂಕ್ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಬ್ಯಾಂಕ್‌ಗಳ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಕೃಷಿ ಸಾಲಕ್ಕಾಗಿ ರೈತರು ತಮ್ಮ ಆಪತ್ತು ಮತ್ತು ಸಂಕಷ್ಟಕ್ಕೆ ಅನುಗುಣವಾಗಿ ಬ್ಯಾಂಕ್‌ಗಳಲ್ಲಿ ಭವಿಷ್ಯದ ನಿಧಿಯಂತೆ ಸಂಗ್ರಹ ಮಾಡಿಕೊಂಡಿರುವ ಬಂಗಾರವನ್ನು ಅಡಮಾನವಿಟ್ಟು ಸಾಲವನ್ನು ಪಡೆದು ಕೃಷಿ ಚಟುವಟಿಕೆಗೆ ಬಳಕೆ ಮಾಡುತ್ತಾರೆ. ಆದರೆ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಬ್ಯಾಂಕ್‌ಗಳು ರೈತರ ಚಿನ್ನದ ಸಾಲಕ್ಕೆ ಅಸಲು ಬಡ್ಡಿಯನ್ನು ಒಟ್ಟಿಗೆ ಪಾವತಿ ಮಾಡಲು ಕಿರುಕುಳ ನೀಡುತ್ತಿವೆ. ತಕ್ಷಣ ಇದು ನಿಲ್ಲಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿರುವ ಬ್ಯಾಂಕ್‌ಗಳು ರೈತರ ಬಂಗಾರದ ಸಾಲಕ್ಕೆ ಆರ್‌ಬಿಐ ನಿಯಮವಿದೆ. ಅಸಲು ಮತ್ತು ಬಡ್ಡಿಯನ್ನು ಸಂಪೂರ್ಣವಾಗಿ ಪಾವತಿ ಮಾಡಿದರೆ ಮಾತ್ರ ನವೀಕರಣ ಮಾಡಲಾಗುವುದು ಎಂದು ರೈತರಿಗೆ ಹೇಳುತ್ತಿದ್ದಾರೆ. ಅಂದರೆ ಸುಮಾರು ನಾಲ್ಕೈದು ವರ್ಷಗಳ ಹಿಂದೆ ಆರ್‌ಟಿಸಿಯನ್ನು ಪಡೆದು ಬ್ಯಾಂಕ್‌ಗಳು ರೈತರ ಚಿನ್ನವನ್ನು ಗಿರವಿ ಇಟ್ಟುಕೊಂಡು ಸಾಲ ನೀಡುತ್ತಿದ್ದರು. ಆಗ ನಿಗದಿತ ಸಮಯದ ಒಳಗೆ ನವೀಕರಣ ಮಾಡಿದರೆ ರೈತರ ಖಾತೆಗೆ ಮೂರು ಪರ್ಸೆಂಟ್ ಬಡ್ಡಿಯನ್ನು ಕೇಂದ್ರ ಸರ್ಕಾರ ಜಮಾ ಮಾಡುವ ನಿಯಮ ನಡೆಸಿಕೊಂಡು ಕೇಂದ್ರ ಸರ್ಕಾರ ಬಂದಿದೆ ಎಂದು ವಿವರಿಸಿದರು.

ಈ ನಿಯಮವನ್ನು ರದ್ದು ಮಾಡಿ ರೈತರಿಗೆ ಆರ್‌ಟಿಸಿ ಇರಲಿ ಅಥವಾ ಇಲ್ಲದಿರಲಿ ಸಾಮೂಹಿಕವಾದಂತ ಬಡ್ಡಿ ವಸೂಲಿ ಮಾಡುವ ನಿಯಮವನ್ನು ಜಾರಿಗೆ ತಂದಿದೆ. ಇದನ್ನು ತಕ್ಷಣ ಕೈ ಬಿಟ್ಟು ಮೊದಲು ಇದ್ದಂತಹ ರೈತರಿಗೆ ಮೂರು ಪರ್ಸೆಂಟ್ ಬಡ್ಡಿ ಸಹಾಯಧನವನ್ನು ಮುಂದುವರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಆರ್‌ಬಿಐ ನಿಯಮವನ್ನು ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬೆಂಗಳೂರಿನ ಆರ್‌ಬಿಐ ವಲಯ ಕಚೇರಿ ಮುಂದೆ ಈ ನಿಯಮ ತಿದ್ದುಪಡಿಗಾಗಿ ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು. ತಕ್ಷಣ ಜಿಲ್ಲಾಧಿಕಾರಿ ಶಿಲ್ಪಾನಾಗ್ ಜಿಲ್ಲೆಯ ಎಲ್ಲ ಬ್ಯಾಂಕ್‌ಗಳ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ಸಿದ್ದರಾಜು, ಪ್ರಭುಸ್ವಾಮಿ, ಗುರುವಿನಪುರ ಮೋಹನ್, ಚಂದ್ರು ಮುಕಡಹಳ್ಳಿ ರಾಜು, ಪುಟ್ಟಮಲ್ಲೇಗೌಡ, ಕಿಳ್ಳಿಲಿಪುರ ಶ್ರೀಕಂಠ, ನಂದೀಶ್, ರಾಮಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net